ಮುಂಬೈ: ಧೂಳಿನ ಬಿರುಗಾಳಿಗೆ ಮುಂಬೈನ ಘಾಟ್ಕೋಪರ್ನಲ್ಲಿ ಏಷ್ಯಾದ ಅತಿ ದೊಡ್ಡ ಫಲಕ ಕುಸಿದ ಘಟನಾ ಸ್ಥಳದಲ್ಲಿ ಮತ್ತೆ 2 ಮೃತ ದೇಹ ಪತ್ತೆಯಾಗಿದೆ. ಇದರೊಂದಿಗೆ ಘಟನೆಯಲ್ಲಿ ಬಲಿಯಾದವರ ಸಂಖ್ಯೆ 16ಕ್ಕೆ ಏರಿದೆ. ಈ ನಡುವೆ ಅಕ್ರಮವಾಗಿ ಫಲಕ ಅಳವಡಿಸಿದ್ದ ಭವೀಶ್ ಪ್ರಭುದಾಸ್ ಬಿಂಧೆ ತನ್ನ ಫೋನ್ ಸ್ವಿಚಾಫ್ ಮಾಡಿಕೊಂಡಿದ್ದು, ಬಂಧನದ ಭೀತಿಯಿಂದ ಮನೆಯಿಂದ ಪರಾರಿಯಾಗಿದ್ದಾನೆ. ಈಗಾಗಲೇ ಆತನ ಪತ್ತೆಗೆ ಏಳು ತಂಡಗಳು ಪ್ರತ್ಯೇಕವಾಗಿ ಹುಡುಕಾಟ ನಡೆಸುತ್ತಿವೆ. ಭವಿಶ್ ಪುಣೆಯ ಲೋನವಾಲದಲ್ಲಿ ಮೊಬೈಲ್ ಲೊಕೇಶನ್ ಕೊನೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗೋ ಮೀಡಿಯಾದ ನಿರ್ದೇಶಕನಾಗಿದ್ದ ಭವೀಶ್ 10 ವರ್ಷಗಳ ಅವಧಿಗೆ ಫಲಕ ಅಳವಡಿಸುವ ಗುತ್ತಿಗೆ ಪಡೆದಿದ್ದ. 40*40 ಅಡಿಗಳ ಅನುಮತಿ ಬದಲು 120*120 ಗಾತ್ರದ ಹೋರ್ಡಿಂಗ್ ಅಳವಡಿಸಿದ್ದ.