Home » 12. ನಮ್ಮನ್ನು ತಿನ್ನುವ ಆಹಾರ
 

12. ನಮ್ಮನ್ನು ತಿನ್ನುವ ಆಹಾರ

by Kundapur Xpress
Spread the love
  1. ನಮ್ಮನ್ನು ತಿನ್ನುವ ಆಹಾರ

ಮನಸ್ಸನ್ನು ಹದ್ದುಬಸ್ತಿನಲ್ಲಿಡಲು ಶಿಸ್ತುಬದ್ಧವಾದ ಜೀವನ ಕ್ರಮ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಸ್ತುಬದ್ಧವಾದ ಜೀವನ ಕ್ರಮದಲ್ಲಿ ಆಹಾರ ಸೇವನೆಯಲ್ಲಿನ ಸರಳತೆಯೂ ಮುಖ್ಯವಾಗುತ್ತದೆ. ನಾವು ತಿನ್ನುವ ಆಹಾರವನ್ನೇ ಹೊಂದಿಕೊಂಡು ನಮ್ಮ ವ್ಯಕ್ತಿತ್ವ – ಸಂಸ್ಕಾರ ರೂಪುಗೊಳ್ಳುತ್ತದೆ. ನಮ್ಮ ವ್ಯಕ್ತಿತ್ವ ಸಾತ್ತ್ವಿಕವೋ ರಾಜಸಿಕವೋ ಅಥವಾ ತಾಮಸಿಕವೋ ಆಗಿರಲು ನಾವು ಸೇವಿಸುವ ಆಹಾರದ ಗುಣಾವಗುಣಗಳೆ ಬಹುಮಟ್ಟಿಗೆ ಕಾರಣವಾಗುತ್ತವೆ. ಕಾಮನೆಗಳನ್ನು ಉದ್ದೀಪಿಸುವ ರಾಜಸಿಕ ಆಹಾರಗಳು ಯಾವತ್ತೂ ನಮ್ಮ ವ್ಯಕ್ತಿತ್ವದಲ್ಲಿ ಅಂತಹವೇ ಭಾವಗಳನ್ನು ತೀವ್ರಗೊಳಿಸುತ್ತವೆ. ನಿರಂತರ ಬಯಕೆಗಳನ್ನು ಹುಟ್ಟು ಹಾಕುತ್ತಲೇ ಇರುವ ರಾಜಸಿಕ ಪ್ರವೃತ್ತಿಯಿಂದ ಅತೃಒತಿ, ಅಸಮಧಾನ, ಹತಾಶೆಗಳೇ ಮನದಾಳದಲ್ಲಿ ಮಡುಗಟ್ಟಿರುತ್ತವೆ. ತಾಮಸಿಕ ಆಹಾರವು ತಾಮಸ ಪ್ರವೃತ್ತಿಯನ್ನು ಹೆಚ್ಚಿಸಿ ಮನಸ್ಸು ಯಾವತ್ತೂ ಅಜ್ಞಾನವೆಂಬ ಅಂದಕಾರದಲ್ಲಿ ತೊಳಲಾಡುವಂತೆ ಮಾಡುತ್ತದೆ. ಜತೆಗ ‘ಅಜ್ಞಾನವೇ ಪರಮಾನಂದ’ ವೆಂಬ ಭಾವವನ್ನು ಗಟ್ಟಿಮಾಡುತ್ತದೆ. ದೇಹವನ್ನು ಜೀವಂತವಿರಿಸುವಷ್ಟಕ್ಕೆ ಮಾತ್ರ ಸೀಮಿತವಾಗಿರುವ ಸರಳ ಸಾತ್ತ್ವಿಕ ಆಹಾರ ಕ್ರಮದಿಂದ ಮನಸ್ಸು ಮತ್ತು ಬುದ್ಧಿ ಸದಾ ಜಾಗೃತವಾಗಿರುತ್ತದೆ. ಹೊಸ ಹೊಸ ಚಿಂತನೆಗಳು, ಸತ್ಯ, ಶಾಂತಿ, ತ್ಯಾಗ, ಸಮಸ್ಟಿ ಹಿತಸಾಧನೆಯೇ ಮೊದಲಾದ ಉದಾತ್ತ ಭಾವಗಳು ಮೂಡುತ್ತಿರುತ್ತವೆ. ಹಾಗಾಗಿಯೇ ‘ನಾವು ಏನನ್ನು ತಿನ್ನುತ್ತೇವೆ ಎನ್ನುವುದರಲ್ಲಿಯೇ ನಮ್ಮನ್ನು ಏನು ತಿನ್ನುತ್ತದೆ (ದುಃಖ, ಚಿಂತೆ, ರೋಗ-ರುಜಿನ) ಎನ್ನುವುದು ನಿಚ್ಚಳವಾಗುತ್ತದೆ’ ಎಂಬ ಮಾತು ನಿತ್ಯ ಸತ್ಯ.

   

Related Articles

error: Content is protected !!