ವಯನಾಡು: ಕೇರಳದ ಸೌಂದರ್ಯದ ಪ್ರತೀಕ ವೆಂಬಂತಿರುವ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಘೋರ ಭೂಕುಸಿತ ಸಂಭವಿಸಿದ್ದು 4 ಹಳ್ಳಿಹಳು ಸಂಪೂರ್ಣ ಕೊಚ್ಚಿ ಹೋಗಿ ನಾಮಾವಶೇಷ ಆಗಿವೆ. ಈ ಘಟನೆಯಲ್ಲಿ 125 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 98 ಜನ ನಾಪತ್ತೆ ಆಗಿದ್ದಾರೆ. ಪಕ್ಕದ ಕಲ್ಲಿಕೋಟೆ ಜಿಲ್ಲೆಯಲ್ಲೂ ಭೂಕುಸಿತ ಸಂಭವಿಸಿ ಓರ್ವ ನಾಪತ್ತೆ ಆಗಿದ್ದಾನೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ವಯನಾಡು ಜಿಲ್ಲೆಯಲ್ಲಿ 37 ಸೆಂ.ಮೀ.ನಷ್ಟು ಹಾಗೂ 48 ಗಂಟೆಗಳಲ್ಲಿ 57 ಸೆಂ.ಮೀ.ನಷ್ಟು ಭಾರೀ ಮಳೆ ಸುರಿದ ಪರಿಣಾಮ ಚೂರಲ್‌ಮಾಲಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮುಂಜಾನೆ 1 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ಏಕಾಏಕಿ ಭೂಮಿ ಕುಸಿದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ
ಘಟನೆಯಲ್ಲಿ 128 ಜನರಿಗೆ ಗಾಯಗಳಾಗಿವೆ. ಘಟನಾ ಸ್ಥಳದಿಂದ 480ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ ನೂರಾರು ಜನರು ಭೂಸಮಾಧಿಯಾಗಿರುವ ಇಲ್ಲವೇ ಅವಶೇಷಗಳ ಅಡಿ ಸಿಲುಕಿಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮನೆ, ಕಟ್ಟಡ, ಮರಗಳ ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಜನರ ರಕ್ಷಣೆಗೆ ಸೇನಾಪಡೆ, ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಸ್ಥಳೀಯ ರಕ್ಷಣಾ ಸಿಬ್ಬಂದಿ ಹರ ಸಾಹಸಪಡುತ್ತಿದ್ದಾರೆ. ಆದರೆ ಸತತವಾಗಿ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಸಂಭವಿಸಿದ ಪ್ರದೇಶಗಳು ಇತರೆ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿರುವುದು ಮತ್ತು ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಈ ನಡುವೆ ಭೀಕರ ದುರ್ಘಟನೆ ಹಿನ್ನೆಲೆ ಯಲ್ಲಿ ಮಂಗಳವಾರ ಹಾಗೂ ಬುಧವಾರ ರಾಜ್ಯದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲು ಮತ್ತು ಶೋಕಾಚರಣೆ ಆಚರಿಸಲು ಕೇರಳ ರಾಜ್ಯ ಸರ್ಕಾರ ನಿರ್ಧರಿಸಿದೆ