51. ರೋಗಕಾರಕ ಸ್ಪರ್ಧೆ
ಬದುಕನ್ನು ಬರಡಾಗಿ ಕಾಣುವ ಶುಷ್ಕ ಮನೋಭಾವ ನಮ್ಮಲ್ಲಿ ಏಕಾದರೂ ಉಂಟಾಗುತ್ತದೆ? ಇಂದಿನ ಯಾಂತ್ರಿಕ ಜಗತ್ತಿನಲ್ಲಿ ವಿಶ್ವಾದ್ಯಂತದ ಜನರಲ್ಲಿ ಕಂಡು ಬರುವ ಸಮಾನ ದೋಷವೇ ಇದಾಗಿದೆ. ಯಾಂತ್ರೀಕರಣದ ಫಲವಾಗಿ ಜಗತ್ತಿನಾದ್ಯಂತ ಜನರ ಆಧುನಿಕ ಸಂಸ್ಕøತಿ ಹಾಗೂ ಜೀವನಕ್ರಮ ಏಕರೂಪತೆಯನ್ನು ತಾಳಿದೆ. ಹಾಗಾಗಿ ಜಾತಿ, ಮತ, ಧರ್ಮ, ರಾಷ್ಟ್ರೀಯತೆಯನ್ನು ಮೀರಿರುವ ಈ ಏಕರೂಪತೆಯು ಸಮಾನ ಗುಣದೋಷಗಳನ್ನು ಸೃಷ್ಟಿಸಿದೆ. ಸ್ಪರ್ಧೆಯೇ ಇಂದಿನ ಆಧುನಿಕ ಬದುಕಿನ ಮೂಲ ಮಂತ್ರವಾಗಿದೆ. ಹಾಗಾಗಿಯೇ ಬದುಕಿನ ಆವೇಗವೂ ಹೆಚ್ಚಿದೆ. ಅಸಮಧಾನ, ಅತೃಪ್ತಿ, ಹತಾಶೆ, ಭಯ, ಸಂಕಟ, ಅಸೂಯೆಯೇ ಮುಂತಾದ ರೋಗಕಾರಕ ಗುಣದೋಷಗಳು ಸರ್ವತ್ರ ವ್ಯಾಪಿಸಿಕೊಂಡಿವೆ. ಇನ್ನೊಬ್ಬನನ್ನು ಮೆಟ್ಟನಿಲ್ಲುವ ಇಂದಿನ ಸ್ಪರ್ಧಾ ವೈಖರಿ ಸಹಜವಾಗಿಯೇ ಸರ್ವ ರೋಗಕಾರಕವಾಗಿದೆ. ಐಶ್ವರ್ಯ ಅಂತಸ್ತು, ಐಷಾರಾಮದ ಸ್ವಾರ್ಥಪರ ಬದುಕಿಗಾಗಿಯೇ ಏರ್ಪಟ್ಟಿರುವ ಈ ಸ್ಪರ್ಧಾ ಮನೋಭಾವ ನಮ್ಮ ದೇಹ, ಮನಸ್ಸು ಹಾಗೂ ಬುದ್ಧಿಯನ್ನು ಸಂಪೂರ್ಣವಾಗಿ ಅನಾರೋಗ್ಯದೆಡೆಗಲ್ಲದೆ ಇನ್ನೆಲ್ಲಿದೆ ಕೊಂಡೊಯ್ದೀತು? ಬದುಕಿನ ಯಾವತ್ತೂ ಕ್ರಿಯೆಗಳನ್ನು ಫಲಾಪೇಕ್ಷೆಯಿಂದಲೇ ಮಾಡುವ ನಮಗೆ ಕರ್ತವ್ಯಪ್ರಜ್ಞೆಯ ಅರಿವು ಉಂಟಾಗುವುದಾದರೂ ಹೇಗೆ? ಭೋಗ ಸಂಸ್ಕøತಿಯ ದುರಂತವೇ ಇದು. ಸ್ಪರ್ಧೆ ನಮ್ಮ ವಿರುದ್ಧವೇ ಏರ್ಪಡಬೇಕು. ನಮ್ಮಲ್ಲಿನ ಧೈರ್ಯ, ಸ್ಥೈರ್ಯ, ಸಾಮಥ್ರ್ಯದ ಪರೀಕ್ಷೆ ನಮ್ಮ ಅಂತರಂಗದೊಳಗೇ ನಡೆಯಬೇಕು. ಎಂದರೆ ನಮ್ಮನ್ನು ನಾವು ಅರಿಯುವ ಸ್ಪರ್ಧೆ ನಡೆಯಬೇಕು. ಅದು ಅತ್ಮಜ್ಞಾನದ ಬೆಳಕಿನಲ್ಲೇ ಸಾಗಬೇಕು! ತಮಸೋಮಾ ಜ್ಯೋತಿರ್ಗವiಯಾ ಎನ್ನುವ ಉಕ್ತಿಗೆ ಅನುಗುಣವಾಗಿ ಕತ್ತಲೆಯಿಂದ ಬೆಳಕಿನತ್ತ, ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಸನ್ಮಾರ್ಗ ಗೋಚರವಾದೀತು. ಗೀತೋಪದೇಶದ ಮೂಲಕ ಕೃಷ್ಣನು ಅರ್ಜುನನಿಗೆ ತೋರಿಸಿದ ಬೆಳಕು ಕೂಡ ಇದೇ ಆಗಿದೆ.