ಉಡುಪಿ : ಉಡುಪಿಯಲ್ಲಿ ಜಗದ್ಗುರು ಮಧ್ವಾಚಾರ್ಯರು ಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನ ಸಪ್ತೋತ್ಸವದ ಕೊನೆಯ ದಿನ ಮಂಗಳವಾರ ರಾತ್ರಿ ಮಕರ ಸಂಕ್ರಮಣದ ಪ್ರಯುಕ್ತ ರಥಬೀದಿಯಲ್ಲಿ ಮೂರು ತೇರು ಉತ್ಸವ ಅತ್ಯಂತ ವೈಭವದಿಂದ ನಡೆಯಿತು
ಇದಕ್ಕೆ ಪೂರ್ವಭಾವಿಯಾಗಿ ಮಧ್ಯಾಹ್ನ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಥಕ್ಕೆ ಶಿಖರಾರೋಹಣ ನಡೆಯಿತು. ರಥದ ಶಿಖರದಲ್ಲಿರುವ ಕಲಶಕ್ಕೆ ಪೂಜೆ ಸಲ್ಲಿಸಿ ನಂತರ ರಥದ ತುದಿಗೆ ಅಳವಡಿಸಲಾಯಿತು
ಸಂಜೆ ಗೀತಾಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಿಶ್ವಗೀತಾ ಕ್ವಿಜ್ ಸ್ಪರ್ಧೆಯ ಕಚೇರಿ – ಕೃಷ್ಣಗೀತಾನುಭವ ಮಂಟಪವನ್ನು ಆಸ್ಟ್ರೇಲಿಯದ ಸಂಸದ ಜಾನ್ ಮುಲ್ಲಾಯ್ ಉದ್ಘಾಟಿಸಿದರು. ಮಠದ ದಿವಾನಾರದ ನಾಗರಾಜ್ ಆಚಾರ್ಯ ಮತ್ತು ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.