ಬಂಟ್ವಾಳ : ಟೋಲ್ ಹಣ ಪಾವತಿಸಲು ನಿರಾಕರಿಸಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕ ಹಾಗೂ ಕ್ಲೀನರ್ ಅನ್ನು ಅರೆಸ್ಟ್ ಮಾಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಆರೋಪಿಗಳಾದ ಲಾರಿ ಚಾಲಕ ಭರತ್ (23) ಮತ್ತು ಲಾರಿಯಲ್ಲಿದ್ದ ಕ್ಲೀನರ್ ತೇಜಸ್ (26) ಬಂಧಿತರು.ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ (25) ಅವರು ಬಂಟ್ವಾಳದ ಬ್ರಹ್ಮರಕೂಟ್ಟು ಟೋಲ್ ಗೇಟ್ ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಎ.18.ಸಿ.3048 ನೇ ನೊಂದಣಿಯ ಟಾಟಾ ಲಾರಿಯೊಂದನ್ನು ಟೋಲ್ ಬಳಿ ರಸ್ತೆಯ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು, ಟೋಲ್ ಗೇಟ್ ಬಳಿ ಟೋಲ್ ಹಣವನ್ನು ಸಂಗ್ರಹಿಸುತ್ತಿದ್ದ ಟೋಲ್ ಸಿಬ್ಬಂದಿ ಟೋಲ್ ಹಣವನ್ನು ಕೇಳಿದಾಗ, ಹಣ ನೀಡಲು ನಿರಾಕರಿಸಿ ಮುಂದಕ್ಕೆ ಚಲಾಯಿಸುತ್ತಾ, ಟೋಲ್ ಗೇಟ್ ಗೆ ಹಾನಿ ಮಾಡಿರುತ್ತಾರೆ.
ಬಳಿಕ ಲಾರಿಯ ಚಾಲಕ ಹಾಗೂ ಇನ್ನೋರ್ವ ಆರೋಪಿಯು, ಟೋಲ್ ಸಿಬ್ಬಂದಿ ಅಂಕಿತ್ ಹಾಗೂ ರೋಹಿತ್ ಎಂಬವರಿಗೆ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾರೆ. ಬಳಿಕ ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಟೋಲ್ ಬೂತ್ ನ ಒಳಗಡೆ ಅಕ್ರಮವಾಗಿ ಪ್ರವೇಶಿಸಿ, ಸದ್ರಿ ಇಬ್ಬರು ಟೋಲ್ ಸಿಬ್ಬಂದಿಗೆ ಪುನಃ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

