Home » ಕಳ್ಳತನ ಪ್ರಕರಣ : 15.80 ಲಕ್ಷ ರೂ. ಮೌಲ್ಯದ ನಗ- ನಗದ್ದು ಕಳವು
 

ಕಳ್ಳತನ ಪ್ರಕರಣ : 15.80 ಲಕ್ಷ ರೂ. ಮೌಲ್ಯದ ನಗ- ನಗದ್ದು ಕಳವು

by Kundapur Xpress
Spread the love

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಡ್‍ಕಾನ್ಸ್ಟೇಬಲ್‍ರೋರ್ವರ ಮನೆಗೆ ಕಳ್ಳರು ನುಗ್ಗಿ ಸುಮಾರು 15.80 ಲಕ್ಷ ರೂ. ಮೌಲ್ಯದ ನಗ- ನಗದನ್ನು ಕದ್ದೊಯ್ದ ಘಟನೆ ಮೇ 15ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಕೋಡಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯ (KSRP) ಗುಪ್ತವಾರ್ತೆ ವಿಭಾಗದ ಹೆಡ್ ಕಾನ್ಸ್ಟೇಬಲ್ ಆಗಿರುವ ಕರುಣಾಕರ ಗೌಡ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಹಾಸನ ಜಿಲ್ಲೆಯ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಗುಪ್ತವಾರ್ತೆ ಸಂಗ್ರಹದ ಕಾರ್ಯನಿರ್ವಹಿಸುತ್ತಿರುವ ಕರುಣಕಾರ ಗೌಡ ಪದ್ಮುಂಜ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕರುಣಾಕರ ಗೌಡರು ಗ್ರಾಮದ ತನ್ನ ಮೂಲ ಮನೆಯಲ್ಲಿ ಒಬ್ಬರೇ ಇದ್ದು, ಪತ್ನಿ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿರುವುದರಿಂದ ಮಕ್ಕಳು ಅವರ ಜೊತೆಗಿದ್ದಾರೆ. ಮನೆಯಲ್ಲಿ ಪತ್ನಿ ತನ್ನ ಕೊಠಡಿಯಲ್ಲಿ ಚಿನ್ನಾಭರಣವನ್ನು ಕಪಾಟಿನಲ್ಲಿರಿಸಿ ಅದಕ್ಕೆ ಬೀಗ ಹಾಕಿ ಬೀಗದ ಕೀಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾರೆ.

ಗುರುವಾರ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದ ಕರುಣಾಕರ ಗೌಡ ರವರು ಐಪಿಎಲ್ ಪಂದ್ಯಾಟವನ್ನು ವೀಕ್ಷಿಸಿ ಮಲಗಿದ್ದವರು ಬೆಳಗ್ಗೆ ಎದ್ದಾಗ ಪತ್ನಿಯ ಕೋಣೆಯ ಬೀಗ ಒಡೆದಿ ರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಕೋಣೆಯೊಳಗಿದ್ದ ಕಪಾಟಿನ ಬೀಗ ಮುರಿದು ಕಪಾಟಿನೊಳಗಿದ್ದ 14 ಲಕ್ಷ ರೂ. ಮೌಲ್ಯದ ಹನ್ನೆರಡುವರೆ ಪವನ್ ತೂಕದ ಚಿನ್ನಾಭರಣಗಳನ್ನು ಹಾಗೂ 80 ಸಾವಿರ ರೂ. ಮೌಲ್ಯದ ವಜ್ರದ ಆಭರಣವನ್ನು ಮತ್ತು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಸಿಬ್ಬಂದಿಯೋರ್ವರು ಮನೆಯಲ್ಲಿ ಮಲಗಿದ್ದ ವೇಳೆಯೇ ಮನೆಯೊಳಗಿಂದ ಬೀಗ ಮುರಿದು ಕಳವು ನಡೆದಿರುವುದು ಆಶ್ಚರ್ಯಕರವೆನಿಸಿದೆ.

 

Related Articles

error: Content is protected !!