ಅಂಕೋಲಾ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ, ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದ್ದು, ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳಿಗೆ ಸಂಪೂರ್ಣ ಹಾನಿಯಾಗಿದೆ . ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ ಗುಡ್ಡ ಕುಸಿತ ರಬಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ,ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾರಿ ಮತ್ತಿತರ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ . ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ವಿಷಯ ತಿಳಿದು,ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ,ಮಧ್ಯಾಹ್ನದೊಳಗೆ ಅಂಕೋಲಾಕ್ಕೆ ಬರುವುದಾಗಿ ತಿಳಿಸಿ, ಮತ್ತಷ್ಟು ಗುಡ್ಡ ಕುಸಿವ ಭೀತಿ ಇರುವುದರಿಂದ,ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ,ಸ್ಥಳೀಯರ ಹಾಗೂ ಹೆದ್ದಾರಿ ಸಂಚರಿಗಳ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು,ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಮಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ.