Categories
ಬ್ರೇಕಿಂಗ್ ನ್ಯೂಸ್

ಕಳೆನಾಶಕಕ್ಕೆ ಬಳಸುವ ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ಮಂಜೇಶ್ವರ: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳೆನಾಶಕಕ್ಕೆ ಬಳಸುವ ವಿಷ ಸೇವಿಸಿ ದಂಪತಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತರನ್ನು ಕಡಂಬಾರು ನಿವಾಸಿಗಳಾದ ಅಜಿತ್ (35) ಮತ್ತು ಅವರ ಪತ್ನಿ ಶ್ವೇತಾ (27) ಎಂದು ಗುರುತಿಸಲಾಗಿದೆ.

ಅಜಿತ್ ಪೈಂಟ್ ವೃತ್ತಿಯವರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್‌ನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಉಪ್ಪಳ ಆಸ್ಪತ್ರೆಗೆ ಒಯ್ದು ಬಳಿಕ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದರೆ, ಶ್ವೇತಾ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಇವರಿಗೆ ಮೂರು ವರ್ಷದ ಮಗು ಹೊಂದಿದ್ದು ಸೋಮವಾರ ಬೆಳಗ್ಗೆ ಅಜಿತ್ ಮಗುವನ್ನು ಪತ್ನಿಯ ಸಹೋದರಿಯ ಮನೆಗೆ ತೆರಳಿ, “ನಾವು ಹೊರಗೆ ಹೋಗುತ್ತಿದ್ದೇವೆ, ಮಗುವನ್ನು ನೋಡಿಕೊಳ್ಳಿ” ಎಂದು ಹೇಳಿ ಮರಳಿದ್ದರು. ಬಳಿಕ ಪತ್ನಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ವೇಳೆಗೆ ಮನೆ ವರಾಂಡಾದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಇಬ್ಬರನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ, ದಂಪತಿ ಬೇರೊಬ್ಬ ಮಹಿಳೆಯ ಚಿನ್ನವನ್ನು ಪಡೆದು ಅಡವಿಟ್ಟಿದ್ದರಂತೆ. ಅದನ್ನು ಮರಳಿಸದೇ ಇದ್ದುದರಿಂದ ಚಿನ್ನವನ್ನು ಮರಳಿಸುವಂತೆ ಒತ್ತಡ ಹೇರಿದ್ದರು. ಮನೆಗೆ ಬಂದು ಕೇಳಿದ್ದರಿಂದ ಮರ್ಯಾದೆಗಂಜಿ ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.