ಮಣಿಪಾಲ : MAHE ಸಂಶೋಧನಾ ನಿರ್ದೇಶಕರಿಗೆ ನಕಲಿ ಇ-ಮೇಲ್‌ ಮೂಲಕ ಕಿರುಕುಳ

by Kundapur Xpress

ಮಣಿಪಾಲ: ನಕಲಿ ಗುರುತಿನ ಹೆಸರಿನಲ್ಲಿ ಇ-ಮೇಲ್ ಖಾತೆ ಸೃಷ್ಟಿಸಿ ಸಂಶೋಧನಾ ನಿರ್ದೇಶಕರ ಸಂಶೋಧನೆ ಕುರಿತು ಅಂತಾರಾಷ್ಟ್ರೀಯ ಜರ್ನಲ್‌ಗಳ ಸಂಪಾದಕರು ಹಾಗೂ ಪ್ರಕಾಶಕರಿಗೆ ತಪ್ಪು ಮಾಹಿತಿ ರವಾನಿಸಿ, ಅವರ ವೃತ್ತಿಜೀವನಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರಾದ ನವೀನ್ ಸಾಲಿನ್ಸ್ (49) ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಂಶೋಧನಾ ನಿರ್ದೇಶನಾಲಯದಲ್ಲಿ ಸಂಶೋಧನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಎಂಸಿ ವೈದ್ಯರಾಗಿ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಕ್ಯಾನ್ಸರ್ ಸೇರಿದಂತೆ ಗಂಭೀರ ಹಾಗೂ ಅಂತಿಮ ಹಂತದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ, ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ದಿನಾಂಕ 01-09-2026ರಂದು ಅಪರಿಚಿತ ವ್ಯಕ್ತಿಯೊಬ್ಬರು “Phytophthora X’ ಎಂಬ ನಕಲಿ ಗುರುತನ್ನು ಬಳಸಿಕೊಂಡು Jay.Pereira@protonmail.com ಇ-ಮೇಲ್‌ ಖಾತೆಯಿಂದ ಅಂತಾರಾಷ್ಟ್ರೀಯ ಜರ್ನಲ್‌ಗಳ ಸಂಪಾದಕರು ಹಾಗೂ ಪ್ರಕಾಶಕರಿಗೆ ಇ-ಮೇಲ್ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಇ-ಮೇಲ್‌ಗಳಲ್ಲಿ ಪಿರ್ಯಾದಿದಾರರ ಸಂಶೋಧನೆ ಕುರಿತು ತಪ್ಪು ಮಾಹಿತಿಯನ್ನು ನೀಡಿ, ಸಂಶೋಧನೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಹಾಗೂ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ, ಪಿರ್ಯಾದಿದಾರರಿಂದ ಪ್ರಕಟಿಸಲಾದ ಸಂಶೋಧನಾ ಲೇಖನಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ, ಅವರ ವೃತ್ತಿಜೀವನದ ಪ್ರಗತಿಗೆ ಅಡ್ಡಿಪಡಿಸುವ ಹಾಗೂ ಪ್ರಸ್ತುತ ಉದ್ಯೋಗಕ್ಕೂ ಅಪಾಯ ಉಂಟು ಮಾಡುವ ಸಾಧ್ಯತೆಯಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles