ಕುಂದಾಪುರ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಬಸ್ರೂರು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಚೇರಿ ವಠಾರದಲ್ಲಿ ದಿನಾಂಕ 06-09-2026ರಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಮಾನ್ಯ ಅಧ್ಯಕ್ಷರಾದ ಶ್ರೀ. ಎಸ್. ಶೀನ ಪೂಜಾರಿ ಅವರು ವಹಿಸಿದ್ದರು. ಶ್ರೀಮತಿ ಸುಧಾ ಸಿ. ಶೆಟ್ಟಿ, ಶ್ರೀಮತಿ ಸಂಧ್ಯಾರಾಣಿ ಶೆಟ್ಟಿ ಹಾಗೂ ಕುಮಾರಿ ಸುಶ್ಮಿತಾ ಇವರ ಪ್ರಾರ್ಥನೆಯೊಂದಿಗೆ ಸಭೆಯ ಕಲಾಪಗಳು ಪ್ರಾರಂಭವಾದವು.
ಮಹಾಸಭೆಯ ನಡಾವಳಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಾಗೂ ಸಂಘದ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸವಿತಾ ಅವರು ಮಂಡಿಸಿದರು.
ಸಂಘದ ಅಧ್ಯಕ್ಷರಾದ ಶ್ರೀ. ಎಸ್. ಶೀನ ಪೂಜಾರಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘದಿಂದ ಸದಸ್ಯರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. 2025-26ನೇ ಸಾಲಿನಲ್ಲಿ ಸಂಘವು ರೂ.105.23 ಕೋಟಿಯಷ್ಟು ಸಾಲ ವಿತರಣೆ ಮಾಡಿದ್ದು, ಸಂಘವು ಗಳಿಸಿದ ರೂ.2.53 ಕೋಟಿಯ ಲಾಭವನ್ನು ವಿವಿಧ ಖಾತೆಗಳಿಗೆ ಹಂಚಿಕೆ ಮಾಡಿದ ನಂತರ ಪಾಲುದಾರ ಸದಸ್ಯರಿಗೆ ಶೇ.17ರಷ್ಟು ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಸಂಘವು ವರದಿ ಸಾಲಿನಲ್ಲಿ ಸುಮಾರು ರೂ.502 ಕೋಟಿಗೂ ಮಿಕ್ಕಿದ ವ್ಯವಹಾರವನ್ನು ನಡೆಸಿದ್ದು, ಸಂಘದ ನೌಕರರು ಹಾಗೂ ಸದಸ್ಯರ ಸಹಕಾರದಿಂದ ಗಮನಾರ್ಹವಾದ ಲಾಭವನ್ನು ಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇತ್ತೀಚೆಗೆ ಸೇವಾನಿವೃತ್ತಿ ಹೊಂದಿದ ಸಂಘದ ಸಿಬ್ಬಂದಿಯಾದ ಶ್ರೀಯುತ ನಾರಾಯಣ ಬಿ., ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಅವನಿ ಎ. ಪೂಜಾರಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಕರುಣಾಕರ ಗಾಣಿಗ, ಹಾಗೂ 2025-26ನೇ ಸಾಲಿನಲ್ಲಿ SSLCಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅನ್ವರ್ಥ ಪೂಜಾರಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಕೃತಕ ಸಮಯಕ್ಕೆ ಸರಿಯಾಗಿ ಕೃಷಿ ಪೂರಕ ಸಾಲ ಮರುಪಾವತಿ ಮಾಡಿರುವ ರೈತ ಸದಸ್ಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಕ್ರಮವಾಗಿ 7ನೇ ತರಗತಿ ಹಾಗೂ SSLC ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಹಾಗೂ 2025-26ನೇ ಸಾಲಿನ SSLC ಮತ್ತು PUC ಅಂತಿಮ ಪರೀಕ್ಷೆಯಲ್ಲಿ ಶೇ.95 ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಗೌರವಧನ ನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ. ಸಂಜೀವ ಪೂಜಾರಿ, ನಿರ್ದೇಶಕರಾದ ಶ್ರೀ. ಕೆ. ಮಹಾಲಿಂಗ, ಶ್ರೀ. ಕೆ. ವಿಕಾಸ ಹೆಗ್ಡೆ, ಶ್ರೀ. ರಾಮಕೃಷ್ಣ ಹೆಗ್ಡೆ, ಶ್ರೀ. ನಟರಾಜ ಬಿ.ವಿ., ಶ್ರೀ. ಅಶೋಕ್ ಪೂಜಾರಿ, ಶ್ರೀಮತಿ ಅನುಪಮ ಶೆಟ್ಟಿ, ಶ್ರೀಮತಿ ಸವಿತಾ ಪೂಜಾರಿ, ಶ್ರೀ. ವೀರಾ, ಶ್ರೀ. ಸುರೇಶ್ ಪೂಜಾರಿ ಹಾಗೂ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀ. ರಾಮಕೃಷ್ಣ ಹೆಗ್ಡೆ ಅವರು ಸ್ವಾಗತಿಸಿದರು. ನಿರ್ದೇಶಕರಾದ ಶ್ರೀ. ಕೆ. ವಿಕಾಸ ಹೆಗ್ಡೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ಶ್ರೀ. ಅಶೋಕ್ ಪೂಜಾರಿ ಅವರು ಧನ್ಯವಾದ ಸಮರ್ಪಿಸಿದರು.
ಉಪ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ. ಕೆ.ಎನ್. ಗೌತಮ ಅವರು ಕಾರ್ಯಕ್ರಮ ನಿರೂಪಿಸಿದರು.

