ಜಾಗತಿಕವಾಗಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯವರ ಲಕ್ಷ ದ್ವೀಪ ಭೇಟಿಯು ಬೈಂದೂರು ಕ್ಷೇತ್ರದಲ್ಲಿ ಮಾರ್ದನಿಸಿದೆ. ಲಕ್ಷದ್ವೀಪದ ಪ್ರವಾಸದ ಬಳಿಕ ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋದೊಂದಿಗೆ ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯವನ್ನು ಹೊಗಳಿದ್ದರು. ಪ್ರಧಾನಿ ಒಂದು ಸಣ್ಣ ನಡೆಯು ಮಾಲ್ಡೀವ್ಸ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಮೂಲಕ ಅಲ್ಲಿನ ಬೀಚ್ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿತ್ತು. ಇದರ ಬೆನ್ನಲ್ಲೇ ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಯಾಯಿತು. ಇದಕ್ಕೆ ದೇಶದ ಖ್ಯಾತನಾಮರು ʼಎಕ್ಸ್ʼ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
ಖ್ಯಾತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹವಾಗ್ ಅವರು ಉಡುಪಿ ಜಿಲ್ಲೆಯ ತ್ರಾಸಿ ಬೀಚ್ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಭಾರತೀಯ ಬೀಚ್ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು. ಇದನ್ನು ಗಮನಿಸಿದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕ್ಷೇತ್ರದ ವಿಶ್ವವಿಖ್ಯಾತ ತ್ರಾಸಿ ಮರವಂತೆ ಕಡಲ ತೀರಕ್ಕೆ ಸೆಹ್ವಾಗ್ ಅವರಿಗೆ ಸ್ವಾಗತ ಎಂದು ತಮ್ಮ X ಖಾತೆಯಲ್ಲಿ #WelcomeSehwag ಟ್ಯಾಗ್ ಮೂಲಕ ಸ್ವಾಗತಿಸಿದ್ದರು