ಬೈಂದೂರು : ಶಾಸಕರ ಪರಿಕಲ್ಪನೆಯ “ದುಡ್ಮಿ” (DUDMI – Dignity, Upliftment and Development of women through Micro Initiatives )ಯೋಜನೆಯ ಪರಿಕಲ್ಪನೆಯಡಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಂ(ಸಂಜೀವಿನಿ)ಇವರ ಸಹಯೋಗದೊಂದಿಗೆ ಮಲ್ಪೆಯ ಪ್ಯಾರಡೈಸ್ ಐಲ್ ಬೀಚ್ ರೆಸಾರ್ಟ್ ಹಮ್ಮಿಕೊಳ್ಳಲಾಗಿದ್ದ “ಸಮುದಾಯ ಪ್ರವಾಸೋದ್ಯಮ ತರಬೇತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಬೈಂದೂರು ಪ್ರವಾಸೋದ್ಯಮ ಚಟುವಟಿಕೆಗೆ ಅತ್ಯಂತ ಪೂರಕವಾದ ವಾತಾವರಣವನ್ನು ಹೊಂದಿದೆ. ಇದನ್ನು ಜಿಲ್ಲೆಯ ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿ ರೂಪಿಸಿ, ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ದೇಶ-ವಿದೇಶಗಳಿಗೆ ಪರಿಚಯಿಸುವ ಮಹತ್ತರ ಉದ್ದೇಶದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ, ಸ್ಥಳೀಯ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಪ್ರವಾಸೋದ್ಯಮ ಕ್ಷೇತ್ರದ ಅಡಿಯಲ್ಲಿ ಶಾಶ್ವತ ಉದ್ಯೋಗಾವಕಾಶ ಹಾಗೂ ಆರ್ಥಿಕ ಸಬಲೀಕರಣ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು.ಗ್ರಾಮೀಣ ಮಹಿಳೆಯರು ಮನೆಯ ಜವಾಬ್ದಾರಿ ಜೊತೆಗೆ ಆದಾಯದ ಮೂಲ ಹುಡುಕಿ ಕೊಳ್ಳುವುದು ಆ ಮೂಲಕ ದುಡಿಮೆಯ ಲಾಭ ಬೈಂದೂರು ಕ್ಷೇತ್ರದ ಎಲ್ಲಾ ಮನೆಗಳಿಗೂ ತಲುಪಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ ಎಂದರು.
ವಿವಿಧ ವಿಷಯಗಳ ಕುರಿತು ತರಬೇತಿ:
ದಿನಪೂರ್ತಿ ನಡೆದ ಈ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಗ್ರಾಮೀಣ ಪ್ರವಾಸೋದ್ಯಮದ ಪ್ರಸ್ತುತ ಅವಕಾಶಗಳು ಮತ್ತು ಇದರಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಯಶಸ್ಸು ಗಳಿಸುವ ಕುರಿತು ಸವಿಸ್ತಾರವಾದ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು.*ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‌ಗಳ ಸಂಜೀವಿನಿ ಒಕ್ಕೂಟಗಳಿಂದ ಒಟ್ಟು 60ಕ್ಕೂ ಹೆಚ್ಚು ಸಂಜೀವಿನಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮಲ್ಪೆಯ ಪ್ಯಾರಡೈಸ್ ಐಲ್ ಬೀಚ್ ರೆಸಾರ್ಟ್ (Paradise Isle Beach Resort) ಮುಖ್ಯಸ್ಥರಾದ ಶ್ರೀಮತಿ ಪ್ರತಿಮಾ ಮನೋಹರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಂದ್ಯ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ತಾಲೂಕು ವ್ಯವಸ್ಥಾಪಕರಾದ ಪ್ರಶಾಂತ್ ಹಾಗೂ ವಲಯ ಮೇಲ್ವಿಚಾರಕರಾದ ಮಹೇಂದ್ರ ಉಪಸ್ಥಿತರಿದ್ದರು.

