Home » ಇನ್‌ಸ್ಟಾಗ್ರಾಂ ಮೂಲಕ ಪರಿಚಯ : 25.66 ಲಕ್ಷ ಹಣ ವಂಚನೆ
 

ಇನ್‌ಸ್ಟಾಗ್ರಾಂ ಮೂಲಕ ಪರಿಚಯ : 25.66 ಲಕ್ಷ ಹಣ ವಂಚನೆ

by Kundapur Xpress
Spread the love

ಕಾರ್ಕಳ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ವಿವಿಧ ಕುಂಟು ನೆಪಗಳನ್ನು ಹೇಳಿ ಯುವಕನೊಬ್ಬನಿಂದ ಬರೋಬ್ಬರಿ 25.66 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಂಚನೆಗೆ ಒಳಗಾದ ನಲ್ಲೂರು ಗ್ರಾಮದ ಗಣೇಶ ಆಚಾರ್ಯ (34) ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2024ರ ಜುಲೈ 23ರಂದು ಇನ್‌ಸ್ಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬಾತ ಪಿರ್ಯಾದಿದಾರ ಗಣೇಶ ಅವರಿಗೆ ಪರಿಚಯವಾಗಿದ್ದ. ಆರಂಭದಲ್ಲಿ ಕಾಲೇಜಿಗೆ ಹೋಗಲು 200 ರೂಪಾಯಿ ಬೇಕೆಂದು ಒತ್ತಾಯಿಸಿ ಹಣ ಪಡೆದಿದ್ದ ಆರೋಪಿ, ನಂತರ ಹಂತ ಹಂತವಾಗಿ ತನ್ನ ಬಲೆ ಬೀಸಿದ್ದಾನೆ. ಕಾಲೇಜು ಫೀಸ್, ಅನಾರೋಗ್ಯದ ನೆಪ, ಲ್ಯಾಪ್‌ಟಾಪ್ ರಿಪೇರಿ ಹಾಗೂ ಕೃಷಿ ಸಾಲ ಮರುಪಾವತಿ ಮಾಡಬೇಕೆಂದು ನಂಬಿಸಿ ಗಣೇಶ ಅವರಿಂದ ಗೂಗಲ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

ತಾನು ಪಡೆದ ಹಣವನ್ನು ವಾಪಸ್ ನೀಡುವುದಾಗಿ ನಂಬಿಸಿದ್ದ ಆರೋಪಿ, ಹಣ ಮರಳಿಸಲು ಬ್ಯಾಂಕ್ ಖಾತೆ ಸರಿಪಡಿಸಬೇಕಿದೆ ಎಂಬ ಸಬೂಬು ನೀಡಿ ಮತ್ತೆ ಹಣ ಪಡೆದಿದ್ದಾನೆ. ಹೀಗೆ 2024ರ ಜುಲೈ 24ರಿಂದ 2026ರ ಏಪ್ರಿಲ್ 4ರ ಅವಧಿಯಲ್ಲಿ ಒಟ್ಟು 25,66,000 ರೂಪಾಯಿಗಳನ್ನು ಪಡೆದು ಬಳಿಕ ವಾಪಸ್ ನೀಡದೆ ಮೋಸ ಮಾಡಿದ್ದಾನೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Related Articles

error: Content is protected !!