ಉಡುಪಿ: ನಿಕಟಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠ ಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸುತ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಬೀಟಿ ಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠ ರಚನೆಗಳುಳ್ಳ ತೊಟ್ಟಿಲನ್ನು ಖರೀದಿಸಿದ್ದಾರೆ. ದಿನಾಂಕ 07-02-2024 ರಂದು ಸಂಜೆ ನಡೆಯುವ ಉತ್ಸವದಲ್ಲಿ ಶ್ರೀಗಳ ಮೂಲಕ ಇದರ ಅರ್ಪಣೆಯಾಗಲಿದ್ದು, ನೂತನ ತೊಟ್ಟಿಲಲ್ಲಿ ಶ್ರೀ ಬಾಲ ರಾಮ ದೇವರಿಗೆ ತೊಟ್ಟಿಲು ಸೇವೆ ನಡೆಸಲಾಗುವುದು ಎಂದು ತೊಟ್ಟಿಲು ಸೇವಾಕರ್ತ ಶ್ರೀ ಕೆ. ರಘುಪತಿ ಭಟ್ ಅವರು ತಿಳಿಸಿದ್ದಾರೆ.
ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಯೋಧ್ಯಾ ರಾಮನ ಸನ್ನಿಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶ್ರೀಗಳ ಮಾರ್ಗದರ್ಶನದಂತೆ ಶ್ರೀ ಕಾಶೀ ಮಠಾಧೀಶರಾದ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ರಜತ ಪಲ್ಲಕ್ಕಿಯನ್ನು ಅರ್ಪಿಸಲು ಸಿದ್ದರಾಗುತ್ತಿರುವಂತೆಯೇ. ಇತ್ತ ಕಡೆ ಮಂಡಲೋತ್ಸವದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸಲು ಉತ್ಸುಕರಾಗಿದ್ದಾರೆ