Home » ಹೂವಿನಕೆರೆಯಲ್ಲಿ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಗೆ ಚಾಲನೆ
 

ಹೂವಿನಕೆರೆಯಲ್ಲಿ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಗೆ ಚಾಲನೆ

by Kundapur Xpress
Spread the love

ಕುಂದಾಪುರ : ದೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭತ್ತದ ತಳಿಗಳಿದ್ದವು. ಕೃಷಿ ನಿರ್ಲಕ್ಷ್ಯದಿಂದಾಗಿ ಅವೆಲ್ಲ ನಶಿಸಿ, ಇಂದು 70ಸಾವಿರದಷ್ಟು ಉಳಿದಿವೆ. ಇವು ಪ್ರಯೋಗಾಲಯದಲ್ಲಿ ಉಳಿಯದೆ, ಗದ್ದೆಗಳಲ್ಲಿ ಬೆಳೆದು ಉಳಿಯಬೇಕು ಎಂಬ ಸದುದ್ದೇಶದಿಂದ ‘ಶುದ್ಧ ನೈವೇದ್ಯ ಸಮರ್ಪಣಂ’ ಎಂಬ ವಿನೂತನ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಪಾರಂಪರಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವ ವಲ್ಲಭತೀರ್ಥ ಸ್ವಾಮಿಗಳು ಹೇಳಿದರು.

ಶ್ರೀ ವಾದಿರಾಜ ಯತಿಗಳ ಅವತಾರ ಭೂಮಿ ಹೂವಿನ ಕೆರೆಯ ಗೌರಿ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶುದ್ಧ ನೈವೇದ್ಯ ಸಮರ್ಪಣಂ ಎಂಬ ಈ ಮಹಾನ್ ಅಭಿಯಾನದಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಹಾಗೂ ಎಲ್ಲೆಡೆಯ ಆಸಕ್ತ ರೈತರು ಕೈ ಜೋಡಿಸಿದ್ದಾರೆ. 2028 ರಲ್ಲಿನ ಸೋದೆ ಮಠದ ಪರ್ಯಾಯದಲ್ಲಿ ಉಡುಪಿಯ ಶ್ರೀ ಕೃಷ್ಣನಿಗೆ ದಿನಕ್ಕೊಂದು ಬಗೆಯ ತಳಿಯ ಸಾವಯವ ಅನ್ನವನ್ನು ನೈವೇದ್ಯ ಮಾಡುವ ಸಂಕಲ್ಪ ಮಾಡಲಾಗಿದೆ. ಈ ಮೂಲಕ ರೈತರಲ್ಲಿ ಕೃಷಿಯ ಆಸಕ್ತಿ ಮೂಡಿಸಿ, ರಾಸಾಯನಿಕ ಮುಕ್ತ ಶುದ್ಧ ಆಹಾರವನ್ನು ಎಲ್ಲರೂ ಹೆಚ್ಚು ಬಳಸುವಂತೆ ಪ್ರೋತ್ಸಾಹಿಸುವುದು ಮತ್ತು ಕೃಷಿ ಭೂಮಿ ಹಡಿಲು ಬೀಳದಂತೆ ತಡೆಯುವುದು ಉದ್ದೇಶವಾಗಿದೆ. ಈ ಅಭಿಯಾನ ಈ ಮೊದಲೇ ಆರಂಭಗೊಂಡಿದ್ದರೂ ಅದಕ್ಕೊಂದು ಪರಿಪೂರ್ಣತೆ ಕೊಡಲು ಶುದ್ಧ ನೈವೇದ್ಯ ಸಮರ್ಪಣಂ ಅನುಷ್ಠಾನಿಸಲಾಗುತ್ತಿದೆ. ಪರ್ಯಾಯದ ಪ್ರಥಮ ದಿನ, ಅನ್ನಬ್ರಹ್ಮನಾದ ಶ್ರೀ ಕೃಷ್ಣನಿಗೆ ಶ್ರೀ ವಾದಿರಾಜರು ಅವತರಿಸಿದ ಗೌರಿ ಗದ್ದೆಯಲ್ಲಿ ಬೆಳೆದ ಭತ್ತದಿಂದಾದ ಅನ್ನವನ್ನೇ ಸಮರ್ಪಿಸಲಾಗುವುದು. ಇದರಿಂದ ಈ ಯೋಜನೆಯನ್ನು ಶ್ರೀ ವಾದಿರಾಜ ಗುರುಗಳ ಮೂಲಕವೇ ಚಾಲನೆಗೊಳಿಸಿದಂತಾಗುತ್ತದೆ. ಪರ್ಯಾಯ ಅವಧಿಯಲ್ಲಿ ದಿನಕ್ಕೊಂದು ತಳಿಯ ಅನ್ನವನ್ನು ನೈವೇದ್ಯ ಮಾಡಲಾಗುವುದು. ಅಂತೆಯೇ ಈ ಭಾಗದ ಪ್ರಸಿದ್ಧ ತಳಿಯಾದ ಗುಲ್ವಾಡಿ ಸಣ್ಣಕ್ಕಿ ತಳಿಯ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ ಎಂಬ ವಿವರಣೆಯನ್ನೂ ಸ್ವಾಮಿಗಳು ನೀಡಿದರು.

ಕೃಷಿ ಪ್ರಯೋಗ ಪರಿವಾರದ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಿ, ವಿಷಮುಕ್ತ ಶುದ್ಧ ಆಹಾರದ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕಾಗಿ ನಾವು ಕೃಷಿ ಪ್ರಯೋಗ ಪರಿವಾರದ ಮೂಲಕ ಆಸಕ್ತ ರೈತರಿಗೆ ವಿವಿಧ ತಳಿಯ ಭತ್ತವನ್ನು ಕೊಟ್ಟು ಬೆಳೆಯುವಂತೆ ಪ್ರೋತ್ಸಾಹಿಸಿದೆವು. ಒಡಿಶಾದ ಪುರಿ ಜಗನ್ನಾಥನಿಗೆ ದಿನಕ್ಕೊಂದು ತಳಿಯ ಅನ್ನ ನೈವೇದ್ಯ ಮಾಡಲಾಗುತ್ತಿದೆ. ಅನ್ನಬ್ರಹ್ಮ ಎಂದೇ ಖ್ಯಾತನಾದ ಉಡುಪಿಯ ಕೃಷ್ಣನಿಗೆ ನಾವ್ಯಾಕೆ ಈ ಪ್ರದೇಶದ ತಳಿಯ ಅಕ್ಕಿಯ ಅನ್ನವನ್ನು ಸಮರ್ಪಿಸಬಾರದು ಎಂದು ಯೋಚಿಸಿದಾಗ, ಸೋದೆ ಸ್ವಾಮಿಗಳು ಒಪ್ಪಿ, ಮುಂಬರುವ ಪರ್ಯಾಯದಿಂದ ಯೋಜನೆಯನ್ನು ಅನುಷ್ಠಾನಿಸಲು ಮುಂದಾಗಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.

ಶ್ರೀವತ್ಸ ಮಾತನಾಡಿ, ನಮ್ಮಲ್ಲಿ ವೈವಿಧ್ಯಮಯ ಭತ್ತದ ತಳಿಗಳಿವೆ. ಅನ್ನಕ್ಕೆ, ಅವಲಕ್ಕಿಗೆ, ಮುಂಡಕ್ಕಿಗೆ, ಔಷಧಿಗೆ ಹೀಗೆ ಎಲ್ಲಕ್ಕೂ ಸೂಕ್ತವಾಗುವಂತಹವುಗಳಿವೆ. ಇವನ್ನು ಉಳಿಸಿಕೊಳ್ಳದಿದ್ದರೆ ಉಂಟಾಗುವ ನಷ್ಟವನ್ನು ಯಾರೂ ಭರಿಸಲಾಗದು ಎಂದರು.

ರಮೇಶ್ ಹತ್ವಾರ್ ಸ್ವಾಗತಿಸಿ ವಂದಿಸಿದರು. ಶ್ರೀ ವಿಶ್ವ ವಲ್ಲಭತೀರ್ಥ ಸ್ವಾಮಿಯವರು ಗೌರಿ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ಮಾಡುತ್ತಿದ್ದಂತೆ ಶಿಷ್ಯ ವರ್ಗದವರು, ಪರಿಸರದ ರೈತರು, ಮಹಿಳೆಯರು ಉತ್ಸಾಹದಿಂದ ನಾಟಿ ಮಾಡಿದರು. ರಾಮಚಂದ್ರ ವರ್ಣ, ರಾಘವೇಂದ್ರ ಗುರಿಕಾರ್, ನರಸಿಂಹಮೂರ್ತಿ ಬುಧ್ಯ, ಸೀತಾರಾಮ ಧನ್ಯ, ಭಾಗ್ಯಲಕ್ಷ್ಮೀ ಧನ್ಯ, ಗಣೇಶ್ ಭಟ್, ವಾದಿರಾಜ ಭಟ್, ಶ್ರೀನಿವಾಸ ಹತ್ವಾರ್, ಸುಜಾತ, ವಿಶ್ವನಾಥ ಅಡಿಗ, ಪರಿಮಳ ಅಡಿಗ ಮುಂತಾದವರು ಸಹಕರಿಸಿದರು.

 

Related Articles

error: Content is protected !!