Home » ಪಶು ಇಲಾಖೆಗೆ ಚೈತನ್ಯ ತುಂಬುತ್ತಿರುವ ಪಶು ಸಖಿಯರ ಸಮಸ್ಯೆಗಳ ಕುರಿತಾಗಿ ಕ್ಷೇತ್ರ ವ್ಯಾಪ್ತಿಯ ಪಶು ಸಖಿಯರ ಜೊತೆ ಬೈಂದೂರು ಶಾಸಕರಿಂದ ಸಂವಾದ
 

ಪಶು ಇಲಾಖೆಗೆ ಚೈತನ್ಯ ತುಂಬುತ್ತಿರುವ ಪಶು ಸಖಿಯರ ಸಮಸ್ಯೆಗಳ ಕುರಿತಾಗಿ ಕ್ಷೇತ್ರ ವ್ಯಾಪ್ತಿಯ ಪಶು ಸಖಿಯರ ಜೊತೆ ಬೈಂದೂರು ಶಾಸಕರಿಂದ ಸಂವಾದ

ಕ್ಷೇತ್ರದ ಹೈನುಗಾರಿಕೆ ಬಲವರ್ಧನೆಗೆ ತಮ್ಮದೇ ಸೇವೆ ಸಲ್ಲಿಸುತ್ತಿರುವ ಪಶು ಸಖಿಯರ ಕುಂದು ಕೊರತೆಗಳಿಗೆ ಸದಾ ಕಾಲ ಧ್ವನಿಯಾಗುವ ಭರವಸೆ

by Kundapur Xpress
Spread the love

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಬೈಂದೂರು ಪಶು ಆಸ್ಪತ್ರೆಯಲ್ಲಿ ಕ್ಷೇತ್ರದ ಪಶು ಸಖಿಯರೊಂದಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರ ವಾಪ್ತಿಯಲ್ಲಿ ಪಶು ಸಂಗೋಪನೆ ಇಲಾಖೆಯಡಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ವಿಚಾರಗಳು ಹಾಗೂ ಪಶು ಸಖಿಯರು ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಬೈಂದೂರು ಪಶು ಆಸ್ಪತ್ರೆಯಲ್ಲಿ ಸಂವಾದ ನಡೆಸಿದರು. ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ತೀವ್ರ ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಪಶು ಇಲಾಖೆಗೆ ಎನ್.ಎಲ್.ಆರ್.ಎಂ ಯೋಜನೆಯಡಿ ಆಯ್ಕೆಗೊಂಡ ಪಶು ಸಖಿಯರು ತಮಗೆ ಸಿಗುತ್ತಿರುವ ಸೀಮಿತ ಗೌರವ ಧನದ ಹೊರತಾಗಿಯೂ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾನುವಾರು ಗಣತಿ ಹಾಗೂ ಲಸಿಕಾ ಕಾರ್ಯಕ್ರಮಗಳಲ್ಲಿ ಪಶು ಸಖಿಯವರ ಉತ್ಸಾಹ ಭರಿತ ಪಾಲ್ಗೊಳ್ಳುವಿಕೆಯಿಂದ ಇಲಾಖೆಗೆ ಚೈತನ್ಯ ಬಂದಿದೆ. ಗ್ರಾಮೀಣ ಭಾಗದಲ್ಲಿನ ವಿಷಮ ಪರಿಸ್ಥಿತಿಯಲ್ಲೂ ಅಚ್ಚು ಕಟ್ಟಾದ ಕಾರ್ಯ ನಿರ್ವಹಣೆಗೆ ಪಶು ಸಖಿಯರು ಅಭಿನಂದನಾರ್ಹರು ಎಂದರು. ಹಾಗಾಗಿ ಪಶು ಸಖಿಯರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧ ಪಟ್ಟ ಇಲಾಖೆಗಳು ಸ್ಪಂದಿಸಬೇಕು ಎಂದರು.*ಪಶು ಸಖಿಯರು ಕ್ಷೇತ್ರ ಮಟ್ಟದಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಈ ಹಿಂದೆ ಜಾನುವಾರು ಗಣತಿ ಮಾಡಿದ ಬಗ್ಗೆ ಪ್ರೋತ್ಸಾಹ ಧನ ಪಾವತಿ ಬಾಕಿ, ಪ್ರಯಾಣ ಭತ್ಯೆ ಬಾಕಿ ಬಗ್ಗೆ ಪ್ರಸ್ತಾಪಿಸಿದಾಗ ಈ ಬಗ್ಗೆ ಬಾಕಿ ಪಾವತಿಗೆ ಕ್ರಮ ವಹಿಸಲು ಹಾಜರಿದ್ದ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ವೈಯುಕ್ತಿಕ ವಿಮಾ ಸೌಲಭ್ಯ, ಕನಿಷ್ಠ ವೇತನ, ಸೇರಿದಂತೆ ಶಾಸಕರ ಮುಂದೆ ಸಾಲು ಸಾಲು ಬೇಡಿಕೆ ಸಲ್ಲಿಸಿದ ಪಶು ಸಖಿಯರು

ಪ್ರಸ್ತುತ ಪಶು ಸಖಿಯರು ನಿಗದಿತ ಸಮಯಕ್ಕಿಂತ ಹೆಚ್ಚುವರಿ ಅವಧಿಗೆ ಇಲಾಖಾ ಕಾರ್ಯಗಳನ್ನು ಮಾಡುತ್ತಿದ್ದರೂ ಯಾವುದೇ ಕನಿಷ್ಠ ವೇತನ ವಿಲ್ಲದೇ ಕೇವಲ ಗೌರವ ಧನ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಕನಿಷ್ಠ ವೇತನ ನಿಗದಿ ಮಾಡಲು ಹಾಗೂ ಪಶು ಸಖಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗಗಳಲ್ಲಿ ಓಡಾಟ ಇರುವುದರಿಂದ ಅಪಾಯದ ಸಂದರ್ಭಗಳಿಗೆ ಪೂರಕವಾಗಿ ವೈಯುಕ್ತಿಕ ವಿಮಾ ಸೌಲಭ್ಯ ಒದಗಿಸಲು ಶಾಸಕರ ಮುಂದೆ ಬೇಡಿಕೆ ಪ್ರಸ್ತುತ ಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಪಶು ಸಖಿಯರ ಎಲ್ಲಾ ನ್ಯಾಯಯುತ ಬೇಡಿಕೆಗಳಿಗೆ ಸರಕಾರದ ಮಟ್ಟದಲ್ಲಿ ಮನವಿ ಹಾಗೂ ಸದನದಲ್ಲಿ ಪ್ರಶ್ನೆ ಎತ್ತುವುದರ ಮೂಲಕ ಪಶು ಸಖಿಯರ ಕುಂದು ಕೊರತೆಗಳಿಗೆ ಸದಾ ಧ್ವನಿಯಾಗುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ 39 ಗ್ರಾಮ ಪಂಚಾಯತ್ ಗಳ ಪಶು ಸಖಿಯರು ಹಾಗೂ ಪಶು ಸಂಗೋಪನೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

 

Related Articles

error: Content is protected !!