ಕುಂದಾಪುರ: ಹಾಜಿ ಗೋಲ್ಡ್ ಎಂಡ್ ಡೈಮಂಡ್ಸ್ ಜುವೆಲ್ಲರಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುವ ಮೂಲತಃ ರಾಜಸ್ಥಾನದವರಾದ ಪ್ರಸ್ತುತ ಅತ್ತಾವರ ನಿವಾಸಿ ರಮೇಶ್ ಕುಮಾರ್ ಜೂನ್ 10 ರಂದು 421.380 ಮಿಲಿ ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಶಾಫ್ ನಿಂದ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಮಧ್ಯಾಹ್ನ 12:00 ಗಂಟೆಗೆ ತನ್ನ ಸ್ನೇಹಿತರಾದ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬಾತ ಮಂಗಳೂರಿನ ಪಂಪ್ವೇಲ್ ಬಳಿ ಸಿಕ್ಕಿದ್ದು ಇಬ್ಬರೂ ಕೂಡ ಜೊತೆಯಲ್ಲಿ ಬಸ್ಸಿನಲ್ಲಿ ಹೊರಟು ಸಂಜೆ 04:30 ಗಂಟೆಗೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ 14 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ 14 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ವಾಪಸು ಮಂಗಳೂರಿಗೆ ಹೊರಟಿದ್ದರು.
ಕುಂದಾಪುರ ತಲುಪುವಾಗ ಸಂಜೆ 07:00 ಗಂಟೆ ಆದ್ದರಿಂದ ರಮೇಶ್ ಕುಮಾರ್ ಹಾಗೂ ಅವರ ಸ್ನೇಹಿತ ರಾಮ್ ಕುಂದಾಪುರದ ಖಾಸಗಿ ಹೊಟೇಲ್ ಒಂದರಲ್ಲಿ ರೂಮ್ ನಂಬರ್ 206 ರಲ್ಲಿ ಉಳಿದುಕೊಂಡಿದ್ದು, ರಾತ್ರಿ ರಮೇಶ್ ಅವರು ಮಲಗುವ ಮಂಚದ ಬಳಿ ಚಿನ್ನಾಭರಣ ಇರುವ ಬ್ಯಾಗ್ ಇಟ್ಟು ಮಲಗಿದ್ದರು.ಜೂನ್ 11 ರಂದು ಬೆಳಗ್ಗಿನ ಜಾವ 03:00 ಗಂಟೆ ಸುಮಾರಿಗೆ ರಮೇಶ್ ಕುಮಾರ್ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ರೂಮ್ ನಲ್ಲಿ ಇರಲಿಲ್ಲ. ಸಂಶಯಗೊಂಡು ಚಿನ್ನಾಭರಣದ ಬ್ಯಾಗ್ ಅನ್ನು ಪರಿಶೀಲಿಸಿದಾಗ ಕಳ್ಳತನ ಮಾಡಿರುವುದಾಗಿ ಬೆಳಕಿಗೆ ಬಂದಿದೆ.ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000/- ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.