ಕುಂದಾಪುರ : ಉಡುಪಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಮೆಡಿಕಲ್ ಶಾಪ್ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಮಂಗಳೂರಿನ ನಂತೂರು ಬಳಿಯ ಅರ್ಷಿತ್ ಅವಿನಾಶ್ ದೋಡ್ರೆ (23) ಬೈಂದೂರಿನ ಪಡುವರಿ ಗ್ರಾಮದ ರಿಲ್ವಾನ್ ಅಲಿಯಾಸ್ ರಿಝಾನ್ (24) ಯಡ್ತರೆ ಗ್ರಾಮದ ಮಹಮ್ಮದ್ ಅರ್ಬಾಝ್ (23) ಬಂಧಿತ ಆರೋಪಿಗಳು.
ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿ ಗ್ರಾಮದ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರು ಎಂಬಲ್ಲಿ ಶ್ರೇಷ್ಠ ಮೆಡಿಕಲ್ ಶಾಪ್ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯಲ್ಲಿರುವ ಮಹಾಂಕಾಳಿ ಜನರಲ್ ಸ್ಟೋರ್ ಹಾಗೂ ಕೋಟಾ ಠಾಣಾ ವ್ಯಾಪ್ತಿಯ ಕೋಟಾ ಮೂರುಕೈಯಲ್ಲಿರುವ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯಲ್ಲಿರುವ ತಲ್ಲೂರು ಬಾರ್-ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸಾಯಿಬ್ರಕಟ್ಟೆಯಲ್ಲಿರುವ ನಂದಿಕೇಶ್ವರ ಹೊಟೇಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು.
ಆರೋಪಿಗಳಿಂದ ಒಟ್ಟು 36,000 ರೂ. ನಗದು, ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಹಾಗೂ 3 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ಆರ್.ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ