ಕುಂದಾಪುರ : ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ಸೊಂದು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಮಗುಚಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಮೃತಪಟ್ಟು, ಇತರ 15 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟ ದುರ್ದೈವಿಯನ್ನು ಬೆಂಗಳೂರಿನ ಬನಶಂಕರಿಯ ಚಂದ್ರಶೇಖರ್ ಎಂಬವರ ಪುತ್ರ ಹರ್ಷ ಬಿ.ಸಿ. (24ವರ್ಷ) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಉಡುಪಿಯ ಸಿದ್ಧಾಂತ್ ಶೆಟ್ಟಿ (23) ಎಂಬವ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಬಂಟ್ವಾಳ ಸಜೀಪ ನಿವಾಸಿ ಮಣಿಕಂಠ, ಶಿವಮೊಗ್ಗದ ಅಣ್ಣಪ್ಪ, ಉಡುಪಿಯವರಾದ ಶ್ರೇಯಸ್, ಮಧುಕರ ಶೆಟ್ಟಿ, ಸುರೇಶ್ ಶೆಟ್ಟಿ ಕುಂದಾಪುರದ ಆನಂದ ಬೆಂಗಳೂರು ನಿವಾಸಿಗಳಾದ ಅಶ್ವಿನಿ ವಿಜಯ್ ವಿಕಾಸ್ ಮುಂಬೈಯ ಜಯಶ್ರೀ ರಾವ್ ಪದ್ದ ಕಟಿಯಾರ್ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಉದಯರವಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕುಂದಾಪುರದ ಖಾಸಗಿ ಕಂಪೆನಿಯ ಬಸ್ಸೊಂದು ತನ್ನದೇ ಕಂಪೆನಿಯ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಬಸ್‌ನಲ್ಲಿ ಒಟ್ಟು 37 ಮಂದಿ ಪ್ರಯಾಣಿಸುತ್ತಿದ್ದರು

