ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಕೆ.ಆರ್.ನಗರ ಮೂಲದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿರುವ ಅಂತಿಮ ತೀರ್ಪನ್ನು ಬುಧವಾರ ಪ್ರಕಟಿಸಲಿದೆ.
ಪ್ರಜ್ವಲ್ ಒಂದು ವೇಳೆ ತಪ್ಪಿತಸ್ಥ ಎಂದು ಸಾಬೀತಾದರೆ ಜೈಲು ಶಿಕ್ಷೆ ಖಚಿತವಾಗಲಿದೆ. ಪ್ರಕರಣ ಸಂಬಂಧ ಜು.18ರಂದು ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು, ಬುಧವಾರ ತೀರ್ಪು ಪ್ರಕಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ತೀರ್ಪು ಪ್ರಕಟ ವೇಳೆ ಆರೋಪಿ ಪ್ರಜ್ವಲ್‌ರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ನಾಲ್ಕರ ಪೈಕಿ ಒಂದು :
ಆರೋಪಿ ಪ್ರಜ್ವಲ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಒಟ್ಟು 4 ಕೇಸ್ ದಾಖಲಾಗಿವೆ. ಈ ಪೈಕಿ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ಸಿಐಡಿ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದು ಪ್ರಜ್ವಲ್ ಪ್ರಕರಣದಲ್ಲಿ ಪ್ರಕಟವಾಗುತ್ತಿರುವ ಮೊದಲ ತೀರ್ಪಾಗಿದೆ.

