ಮಂಗಳೂರು : ವಿದೇಶದಿಂದ ಚಿನ್ನ ಮತ್ತು ಡಾಲರ್ ಕಳುಹಿಸುವುದಾಗಿ ನಂಬಿಸಿ ಅಪರಿಚಿತರು ಮಹಿಳೆಯೊಬ್ಬರಿಗೆ 28.95 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
54 ವರ್ಷದ ದೂರುದಾರ ಮಹಿಳೆ 2025ರ ಮೇ ತಿಂಗಳಿನಲ್ಲಿ ಫೇಸ್ ಬುಕ್ ನೋಡುತ್ತಿದ್ದಾಗ ಡಾ| ಕ್ಲಿಂಟನ್ ಸ್ಮಿತ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ಅನಂತರ ಆತ ಮಹಿಳೆಯ ವಾಟ್ಸ್ ಆ್ಯಪ್ ನಂಬರ್ ಪಡೆದು, ವಾಟ್ಸ್ ಆ್ಯಪ್ ನಲ್ಲಿ ಸಂದೇಶ ಕಳುಹಿಸಿ ತಾನು ನೆದರ್ ಲ್ಯಾಂಡ್ ನಲ್ಲಿ ವಾಸವಾಗಿದ್ದು, ಕಾರ್ಡಿಯೋಲಾಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.
ಬಳಿಕ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಬಳಿಕ ಆತ ಮಹಿಳೆಗೆ ವಿದೇಶಿ ಚಿನ್ನ ಮತ್ತು ವಿದೇಶಿ ಡಾಲರ್‌ಗಳನ್ನು ಕಳುಹಿಸುವುದಾಗಿ ನಂಬಿಸಿದ್ದಾನೆ. ಒಂದು ದಿನ ಚಿನ್ನ ಮತ್ತು ಡಾಲರ್‌ವಿಮಾನದ ಮೂಲಕ ಪಾರ್ಸೆಲ್ ಮಾಡಿದ್ದು, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ. ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ವಶಪಡಿಸಿಕೊಂಡಿದ್ದಾರೆ ತಿಳಿಸಿದ್ದಾನೆ.
ಬಳಿಕ ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎಂದು ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ ವಿದೇಶದಿಂದ ಪಾರ್ಸಲ್ ಬಂದಿರುವ ಕಾರಣ ಅದಕ್ಕೆ ಕಸ್ಟಮ್ಸ್ ಸುಂಕ ಪಾವತಿ ಮಾಡಬೇಕು ಎಂದು ಹೇಳಿ ಮೊಬೈಲ್ ಸಂಖ್ಯೆಯೊಂದನ್ನು ನೀಡಿದ್ದಾರೆ.
ಮಹಿಳೆ ಆ ಸಂಖ್ಯೆಗೆ ಕರೆ ಮಾಡಿದಾಗ ಆತ, ಪಾರ್ಸೆಲ್ ನೀಡಲು ಸ್ಟೋರೇಜ್ ಚಾರ್ಜನ್ ಎಂದು ದಿನಕ್ಕೆ 5,000 ರೂ. ನಂತೆ ಹಾಗೂ ಕಸ್ಟಮ್ ಸುಂಕ ಪಾವತಿಮಾಡಬೇಕು ಎಂದು ತಿಳಿಸಿದ್ದಾನೆ.
ಅದರಂತೆ ದೂರುದಾರ ಮಹಿಳೆ ಅಪರಿಚಿತ ವ್ಯಕ್ತಿ ತಿಳಿಸಿದ ವಿವಿಧ ಖಾತೆಗಳಿಗೆ ಒಟ್ಟು 28.95 ಲಕ್ಷ ರೂ. ಪಾವತಿ ಮಾಡಿದ್ದಾರೆ. ವ್ಯಕ್ತಿ ಪಾರ್ಸೆಲನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸುವುದಾಗಿ ತಿಳಿಸಿದ್ದು, ವಿಮಾನ ನಿಲ್ದಾಣಕ್ಕೆ ಹೋಗಿ ವಿಚಾರಿಸಿದಾಗ ಯಾವುದೇ ಪಾರ್ಸೆಲ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗೆ ಕರೆ ಮತ್ತು ಸಂದೇಶ ಕಳುಹಿಸಿದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ – ಎಂದು ಹೇಳಿದ್ದಾರೆ.
2025 ರ ಜೂ.6 ರಿಂದ 2026 ರ ಮೇ 8ರ ವರೆಗೆ ಹಂತ ಹಂತವಾಗಿ 28.95 ಲಕ್ಷ ರೂ. ವನ್ನು ಅಪರಿಚಿತರು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಮನವಿ ಮಾಡಿದ್ದಾರೆ.

