ಮಂಗಳೂರು : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿ ಆದಿಲ್ ಮೆಹರೂಫ್ ಎಂಬಾತ ಈ ಹಿಂದೆ ಕೊಲೆಯಾಗಿದ್ದ ಫಾಝಿಲ್ ಸಹೋದರನಾಗಿದ್ದು ಕೃತ್ಯ ನಡೆಸಲು 3 ಲಕ್ಷ ರೂ. ಹಣ ನೀಡಿದ್ದ ಎಂದರು. ಬಜ್ಪೆ ಶಾಂತಿಗುಡ್ಡೆ ನಿವಾಸಿ, ಕಿನ್ನಿಪದವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಡೈವರ್ ಅಬ್ದುಲ್ ಸಫ್ವಾನ್ (29) ಶಾಂತಿಗುಡ್ಡೆ ನಿವಾಸಿ ನಿಯಾಜ್ (28), ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಜಾಮಿಲ್ (32), ಕಳವಾರು ಕುರ್ಸಗುಡ್ಡೆ ನಿವಾಸಿ ಕಲಂದರ್ ಶಾಫಿ (29), ಬಾಳ ಗ್ರಾಮ ಮಂಗಳಪೇಟೆ ನಿವಾಸಿ ಆದಿಲ್ ಮೆಹರೂಫ್ (27), ಕಳಸ ರುದ್ರಪಾದೆಯ ರಂಜಿತ್ (19), ಕಳಸ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (28) ಬಂಧಿತರು
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.
ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. 2023ರಲ್ಲಿ ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ಪ್ರಕರಣದ ಆರೋಪದಲ್ಲಿ ಸುಹಾಸ್ ಶೆಟ್ಟಿ ಬಂಧನಕ್ಕೊಳಗಾದ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸ್ ಯುಕ್ತರು ತಿಳಿಸಿದರು.

