ಬೆಂಗಳೂರು : ಕರ್ನಾಟಕ ಜನತೆಯ ದಶಕಗಳ ಕನಸು ಕೊನೆ ಗೂ ನನಸಾಗಿದ್ದು ಬಹುದಿನಗಳ ಬೇಡಿಕೆಯಂತೆ ಅಮೆರಿಕದ ದೂತಾವಾಸ(ಯುಎಸ್ ಕಾನ್ಸುಲೇಟ್) ಕಚೇರಿಯು ಶುಕ್ರವಾರ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಿದೆ.
ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್‌ಸೆಟ್ಟಿ ಅವರು ಚಾಲನೆ ನೀಡಿದ್ದು ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು, ಮಾರಿಯೇಟ್ ಹೊಟೇಲ್‌ನಲ್ಲಿ ಆರಂಭವಾದ ಕಚೇರಿಯು ಭಾರತದಲ್ಲಿ ಅಮೆರಿಕದ 5ನೇ ಕಾನ್ಸುಲೇಟ್ ಆಗಿದೆ.
ಕಚೇರಿ ಉದ್ಘಾಟಿಸಿ ಮಾತನಾಡಿದ ಜೈಶಂಕರ್ ಅವರು ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಕ್ಕೆ ಬೆಂಗಳೂರು ಅತ್ಯಂತ ಪ್ರಾಶಸ್ತ್ರ ಸ್ಥಳವಾಗಿದೆ. ಇಲ್ಲಿ ಅಮೆರಿಕದ ನೂತನ ದೂತಾವಾಸ ಕಚೇರಿ ಆರಂಭಗೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಹೊಸ ಭಾಷ್ಯ ಬರೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.