ನವದೆಹಲಿ: ಕಾಶ್ಮೀರ ಭಾಗದಂತೆ ಜಮ್ಮುವಿನಲ್ಲೂ ಶೂನ್ಯ ಭಯೋತ್ಪಾದನೆ ಕ್ರಮ ಜಾರಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆ ಅಧಿಕಾರಿಗಳಿಗೆ ಭಾನುವಾರ ಖಡಕ್ ಆದೇಶ ನೀಡಿದ್ದಾರೆ. ‘ಹೊಸ ವಿಧಾನಗಳ ಮೂಲಕ ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಗ್ಗು ಬಡಿದು ಮಾದರಿ ಆಗಲಿದೆ’ ಎಂದಿದ್ದಾರೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಜಮ್ಮು ಭಾಗದಲ್ಲಿ ನಡೆದ ಸರಣಿ ಭಯೋತ್ಪಾದಕ ಘಟನೆ ಹಿನ್ನೆಲೆಯಲ್ಲಿ ಶಾ ಭಾನುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ, ಜೂ.29ರಿಂದ ಅಮರನಾಥ ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲೂ ಸ್ಥಿತಿಯ ಅವಲೋಕನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಶೂನ್ಯ ಭಯೋತ್ಪಾದನಾ ಯೋಜನೆ’ಯ ಮೂಲಕ ಕಾಶ್ಮೀರ ಕಣಿವೆಯಲ್ಲಿ ಸಾಧಿಸಿದ ಯಶಸ್ಸನ್ನು ಜಮ್ಮು ವಿಭಾಗದಲ್ಲಿ ಪುನರಾವರ್ತಿಸ ಬೇಕು ಎಂದು ಭದ್ರತಾ ಏಜೆನ್ಸಿಗಳಿಗೆ ನಿರ್ದೇಶಿಸಿದರು.