ನವದೆಹಲಿ : ಭಾರತದ ಅಪರೇಶನ್ ಸಿಂದೂರದಿಂದ ತನ್ನ ಉಗ್ರ ನೆಲೆಗಳನ್ನು ಕಳೆದುಕೊಂಡು ತೀವ್ರ ಮುಖಭಂಗಕ್ಕೊಳಗಾರಿರುವ ಪಾಕಿಸ್ತಾನವು ಬುಧವಾರ ರಾತ್ರಿಯಿಂದೀಚೆಗೆ ಭಾರತದ 15 ನಗರಗಳ ಮಿಲಿಟರಿ ನೆಲೆಗಳ ಮೇಲೆ ರಾಕೆಟ್ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಬಳಸಿ ಪ್ರತಿದಾಳಿ ನಡೆಸುವ ವಿಫಲ ಯತ್ನ ನಡೆಸಿದೆ.
ಪಾಕಿಸ್ತಾನದ ಈ ದುಸ್ಸಾಹಸಕ್ಕೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದ್ದು, ರಷ್ಯಾ ನಿರ್ಮಿತ ಎಸ್-400 ವಾಯುರಕ್ಷಣಾ ವ್ಯವಸ್ಥೆ ಮೂಲಕ ರಾಕೆಟ್ ಹಾಗೂ ಡ್ರೋನ್‌ಗಳನ್ನು ಬಳಸಿ ಹಿಮ್ಮೆಟ್ಟಿಸಿದೆ. ಬಳಿಕ ಇಸ್ರೇಲ್ ನಿರ್ಮಿತ ಹಾರ್ಪಿ ಡೋನ್ ಬಳಸಿ ಪಾಕಿಸ್ತಾನದ 3 ಪ್ರಮುಖ ವಾಯು ರಕ್ಷಣಾ ಘಟಕಗಳನ್ನು ನಾಶ ಮಾಡಿದೆ

ಭಾರತವು ಕರಾಚಿ, ಲಾಹೋರ್, ಸಿಯಾಲ್ ಕೋಟ್ ಸೇರಿ ನೆರೆಯ ದೇಶದ 3 ನಗರದಲ್ಲಿರುವ ಚೀನಾ ಅಭಿವೃದ್ಧಿಪಡಿಸಿದ ಎಚ್‌ಕ್ಯು-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ‘ಆಪರೇಶನ್ ಸಿಂದೂರ ಭಾಗ-2’ ಎಂದು ಪರಿಗಣಿಸಲಾಗಿದೆ.
‘ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದರೆ ನಾವೂ ಅದಕ್ಕೆ ಪ್ರತೀಕಾರ ಕೈಗೊಳ್ಳುತ್ತೇವೆ’ ಎಂದು ಭಾರತ ಹೇಳಿತ್ತು. ಈಗ ಅದಕ್ಕೆ ಅನುಗುಣವಾಗಿ ತನ್ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದಕ್ಕೆ ಭಾರತ ಕೂಡ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ. ಭಾರತ ಹೀಗೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ

