ನವದೆಹಲಿ : ಪ್ರತೀಕಾರಕ್ಕೆ ಹಾತೊರೆಯುತ್ತಿರುವ ಪಾಕಿಸ್ತಾನ ಗುರುವಾರ ಶ್ರೀನಗರ, ಚಂಡೀಗಢ ಸೇರಿ ಉತ್ತರ ಹಾಗೂ ಪಶ್ಚಿಮ ಭಾರತದ 15 ನಗರಗಳ ಮಿಲಿಟರಿ ನೆಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಹಲವು ಕ್ಷಿಪಣಿ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲು ಯತ್ನಿಸಿದೆ.
ಪಾಕಿಸ್ತಾನದ ಈ ದಾಳಿಗೆ ಮೊದಲೇ ಸಿದ್ಧವಾಗಿದ್ದ ಭಾರತವು ಗಡಿದಾಟಿ ಬಂದ ಎಲ್ಲ ಕಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿತು. ಇದಕ್ಕಾಗಿ ರಷ್ಯಾ ನಿರ್ಮಿತ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಬಳಸಿಕೊಂಡಿತು. ಬಳಿಕ ಪಾಕಿಸ್ತಾನದ ಲಾಹೋರ್, ಕರಾಚಿ ಹಾಗೂ ಸಿಯಾಲ್ ಕೋಟ್‌ನ ವಾಯು ರಕ್ಷಣಾ ವ್ಯವಸ್ಥೆ/ಘಟಕಗಳನ್ನು ನಾಶಮಾಡಲು ಹಾರ್ಪಿ ಡೋನ್‌ಗಳನ್ನು ಬಳಸಿತು ಎಂದು ಮೂಲಗಳು ಹೇಳಿವೆ

ರಕ್ಷಣಾ ಸಚಿವಾಲಯ ಹೇಳಿದ್ದೇನು ?
ಭಾರತದ ರಕ್ಷಣಾ ಸಚಿವಾಲಯ ಕೂಡ ಈ ಬಗ್ಗೆ ಹೇಳಿಕೆ ನೀಡಿದೆ. ‘ಅವಂತಿಪುರ, ಶ್ರೀನಗರ, ಜಮ್ಮು, ಪಠಾನ್‌ಕೋಟ್, ಅಮೃತ್‌ಸರ, ಕುರ್ತಾಲ, ಜಲಂದರ್, ಲುಧಿಯಾನ, ಅದಾಂಪುರ, ಭಟಿಂಡ, ಚಂಡೀಗಢ, ನಾಲ್, ಫಲೋಡಿ, ಉತ್ತರಾಲಿ ಮತ್ತು ಭುಜ್ ನಗರಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಹಲವು ರಾಕೆಟ್ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಹಾರಿಬಿಟ್ಟಿತ್ತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಅನ್‌ಮ್ಯಾನ್ಸ್ ರ್ಏಕ್ರಾಫ್ಟ್ ಸಿಸ್ಟಮ್ಸ್ ಬಳಸಿ ಹೊಡೆದು ಹಾಕಲಾಗಿದೆ’ ಎಂದು ಮಾಹಿತಿ ನೀಡಿದೆ. ಭಾರತದ ಪ್ರತಿದಾಳಿಗೆ ಪತನವಾದ ಪಾಕಿಸ್ತಾನದ ಕ್ಷಿಪಣಿ ಮತ್ತು ಡೋನ್‌ಗಳ ಬಿಡಿಭಾಗಗಳು ಹಲವೆಡೆ ಪತ್ತೆಯಾಗಿವೆ.

