ಹೊಸದಿಲ್ಲಿ : ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾದ ಲಾಹೋರ್ ಹೆಸರು ಭಗವಾನ್ ಶ್ರೀ ರಾಮನ ಪುತ್ರ ಲವನ ಹೆಸರು ಆಧರಿಸಿದ್ದಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಇತ್ತೀಚೆಗೆ ಲಾಹೋರ್‌ನಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಭೇಟಿ ನೀಡಿದ ಶುಕ್ಲಾ ಈ ಸಂಗತಿ ಕಂಡುಕೊಂಡಿದ್ದಾಗಿ ಹೇಳಿದ್ದಾರೆ
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಲಾಹೋರ್‌ನ ಪುರಸಭೆಯ ದಾಖಲೆಗಳಲ್ಲಿ ನಗರವು ಭಗವಾನ್ ರಾಮನ ಪುತ್ರ ಲವನ ಹೆಸರನ್ನು ಆಧರಿಸಿದ್ದಾಗಿದೆ ಎಂದು ಉಲ್ಲೇಖಿಸಲಾಗಿದೆ.
ಅದೇ ರೀತಿ ಅಲ್ಲಿನ ಕೌಸರ್ ನಗರವನ್ನು ಶ್ರೀರಾಮ ಮತ್ತೋರ್ವ ಪುತ್ರ ಹಾಗೂ ಲವನ ಅವಳಿ ಸಹೋದರ ಕುಶನ ಹೆಸರನು ಆಧರಿಸಿರುವುದಾಗಿದೆ. ಇದನ್ನು ಪಾಕಿಸ್ತಾನ ಸರ್ಕಾರವು ಸಹ ಒಪ್ಪಿಕೊಳ್ಳುತ್ತದೆ ಎಂದು ಶುಕ್ಲಾ ತಿಳಿಸಿದ್ದಾರೆ.
ಪ್ರಸಕ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಹ್ವಾನದ ಮೇರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಶುಕ್ಲಾ ಅವರಿಗೆ ಈ ಕುತೂಹಲಕಾರಿ ಸಂಗತಿ ತಿಳಿಯಿತು.

