ನವದೆಹಲಿ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಕಡಿಮೆ ಸ್ಥಾನ ಗಳಿಸುವುದರೊಂದಿಗೆ ಟಿಡಿಪಿಯ ಸರ್ವೋಚ್ಚ ನಾಯಕ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಕಿಂಗ್ ಮೇಕರ್’ಗಳಾಗಿ ಹೊರಹೊಮ್ಮಿದ್ದಾರೆ. ‘
ಬಿಜೆಪಿ ನೇತೃತ್ವದ ಎನ್ಡಿಎ ಜತೆಗೇ ಈ ಇಬ್ಬರೂ ಚುನಾವಣೆ ಎದುರಿಸಿದ್ದರು. ಬಿಜೆಪಿ ಬಹುಮತಕ್ಕೆ ಸುಮಾರು 30 ಸ್ಥಾನಗಳ ದೂರವಿದೆ. ಟಿಡಿಪಿ 16, ಜೆಡಿಯು 14 ಸ್ಥಾನದಿಂದಾಗಿ ಆ ಕೊರತೆ ಸುಲಭವಾಗಿ ನೀಗುತ್ತಿದೆ. ಹೀಗಾಗಿ ಕೇಂದ್ರದಲ್ಲಿ 3ನೇ ಬಾರಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೇರುವಲ್ಲಿ ಈ ಇಬ್ಬರದ್ದೂ ಪ್ರಮುಖ ಪಾತ್ರವಿದೆ.
ಆದರೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು ಯಾವ ಕಡೆಗೆ ಬೇಕಾದರೂ ತೂರಿಕೊಳ್ಳುವ ರಾಜಕಾರಣಿಗಳಾಗಿದ್ದಾರೆ. ಇದು ಅವರ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಸ್ಪಷ್ಟವಾಗಿ ಕಾಣುತ್ತದೆ. ಸದ್ಯ ಈ ಇಬ್ಬರೂ ಎನ್ಡಿಎ ಸರ್ಕಾರವನ್ನು ಬೆಂಬಲಿಸಿದ್ದರೂ, ಭವಿಷ್ಯದಲ್ಲಿ ಈ ಇಬ್ಬರೇ ಸರ್ಕಾರಕ್ಕೆ ಮುಳುವಾಗಬಹುದು. ಹಲವು ಬೇಡಿಕೆಗಳನ್ನು ಇಡುವ ಮೂಲಕ ಸರ್ಕಾರವನ್ನು ಮುನ್ನಡೆಸುವವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬ ತರ್ಕವೂ ಇದೆ.