ಹೊಸದಿಲ್ಲಿ : ದೇಶದಲ್ಲಿ ಸಂವಿಧಾನಕ್ಕೆ ಭಂಗ ತಂದಿದ್ದು ನಾವಲ್ಲ, ಅದು ಕಾಂಗ್ರೆಸ್. ಈ 75 ವರ್ಷದಲ್ಲಿ 55 ವರ್ಷ ಒಂದೇ ಕುಟುಂಬ ಅಧಿಕಾರದಲ್ಲಿದ್ದು, ಇದು ತಮಗೆ ಬೇಕಾದ ಹಾಗೆ, ಕಾಲಕಾಲಕ್ಕೆ ತಕ್ಕಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡು ಬರುತ್ತಲೇ ಇದೆ. ಒಮ್ಮೆ ರಕ್ತದ ರುಚಿ ನೋಡಿದ ಅದು ಪದೇ ಪದೆ ಸಂವಿಧಾನಕ್ಕೆ ಗಾಯ ಮಾಡಿಕೊಂಡು ಬರುತ್ತಲೇ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮತ್ತು ನೆಹರು-ಗಾಂಧಿ ಕುಟುಂಬದ ವಿರುದ್ಧ ಕಟು ಮಾತುಗಳಲ್ಲಿ ಟೀಕಾ ಪ್ರಹಾರ ನಡೆಸಿದರು.
ಲೋಕಸಭೆಯಲ್ಲಿ ಸಂವಿಧಾನ ಅಂಗೀಕರಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ನಡೆದ 2 ದಿನಗಳ ಚರ್ಚೆಗೆ ಉತ್ತರ ನೀಡುವ ವೇಳೆ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಮತ್ತು ನೆಹರು ಕುಟುಂಬದ ವಿರುದ್ಧ ಟೀಕೆಗೆ ಸಿಕ್ಕ ಅವಕಾಶವನ್ನು ಬಿಡಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ *ತಮ್ಮ ಸರ್ಕಾರ ಮತ್ತು ಈ ಹಿಂದೆ ಇದ್ದ ವಾಜಪೇಯಿ ನೇತೃತ್ವದ ಸರ್ಕಾರ ಹೇಗೆ ಸಂವಿಧಾನ ರಕ್ಷಣೆ ಮಾಡಿತು ಎಂದು ಹೇಳುತ್ತಲೇ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸಂವಿಧಾನದ ದುರ್ಬಳಕೆ ಹೇಗೆ ಆಯ್ತು ಎಂಬುದನ್ನು ಸವಿವರವಾಗಿ ಬಿಚ್ಚಿಟ್ಟರು. ತಮ್ಮ ಸರ್ಕಾರದ ನೀತಿಗಳು ಭಾರತದ ಶಕ್ತಿ ಮತ್ತು ಏಕತೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದರೆ, ಕಾಂಗ್ರೆಸ್ ಸಂವಿಧಾನಕ್ಕೆ ಪದೇ ಪದೆ ಗಾಯ ಮಾಡಿತು ಎಂದರು. ಅಲ್ಲದೆ, ಹಿಂದಿನ ಕಾಂಗ್ರೆಸ್ ಸರ್ಕಾರಗಳು, ದೇಶದ ವೈವಿಧ್ಯತೆಯಲ್ಲಿ ವಿಷಕಾರಿ ಬೀಜಗಳನ್ನು ಬಿತ್ತಿದವು ಎಂದು ಹೇಳಿದರು.