ನ್ಯೂಯಾರ್ಕ್ : ಉಕ್ರೇನ್ ಸಂಘರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಚಿಂತಿತರಾಗಿದ್ದಾರೆ. ಸಂಘರ್ಷಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕೆಂಬ ಸಂಕಲ್ಪಕ್ಕೆ ಬದ್ದರಾಗಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಜತೆ ಪ್ರಧಾನಿ ನಮೋ ನಡೆಸಿರುವ ಮಾತುಕತೆಯಿಂದ ಇದು ವೇದ್ಯವಾಗುತ್ತಿದೆ. ಸಂಘರ್ಷವನ್ನು ಯಾವುದಾದರು ಮಾರ್ಗದಿಂದ ಕೊನೆಗಾಣಿಸಲೇಬೇಕೆಂಬುದು ಪ್ರಧಾನಿ ನಮೋ ದೃಢ ಸಂಕಲ್ಪವೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಹೇಳಿದ್ದಾರೆ.
ಮಾತುಕತೆ ಮತ್ತು ರಾಜತಾಂತ್ರಿಕತೆ ಮುಖೇನ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದಕ್ಕೆ ನಮ್ಮ ಬೆಂಬಲವಿದೆ. ನಾವೀ ಪಾತ್ರವನ್ನು ವಹಿಸುವುದು ಸಹಜ ಆದರೆ ಸಂಘರ್ಷದಿಂದ ತೀರಾ ಚಿಂತಿತರಾಗಿರುವ ಪ್ರಧಾನಿ ನಮೋ, ವೈಯ್ಯಕ್ತಿಕವಾಗಿಯೂ ಪ್ರಯತ್ನ ಪಟ್ಟು ಸಂಘರ್ಷಕ್ಕೊಂದು ಶಾಂತಿಯುತ ಪರಿಹಾರ ಕಾಣಲು ಬದ್ಧರಾದಂತಿದೆ. ಸಂಬಂಧಪಟ್ಟ ಎಲ್ಲರಲ್ಲೂ ಮಾತುಕತೆ ನಡೆಸಲು ಕೂಡ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ವಿಶದಪಡಿಸಿದರೆಂದು ಹೇಳಿಕೆಯೊಂದು ತಿಳಿಸಿದೆ.
ಪ್ರಧಾನಿ ನಮೋ ಪ್ರಯತ್ನಗಳಿಗೆ ಮೆಚ್ಚುಗೆ :
ಉಕ್ರೇನ್ ಸಂಕಷ್ಟಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿರುವುದು ಮುಖ್ಯವಾಗಿ ಸಂಘರ್ಷಕ್ಕೊಂದು ಸೂಕ್ತ ಪರಿಹಾರ ಜತೆ ವಲಯದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತದ ಪ್ರಧಾನಿ ಮೋದಿ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಝಲೆನ್‌ಸ್ಕಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರೆಂದು ಮಿಸ್ತ್ರಿ ಹೇಳಿದ್ದಾರೆ.