102
ನವದೆಹಲಿ : 64000 ಕೋಟಿ ರೂಪಾಯಿ ವೆಚ್ಚದಲ್ಲಿ ನೌಕಾಪಡೆಗೆ 26 ರಫೇಲ್ ಯುದ್ಧ ವಿಮಾನ ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ಕುರಿತ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸೋಮವಾರ ಸಹಿ ಹಾಕಿವೆ.
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನಿಂದ ವಿಮಾನ ಖರೀದಿಸಲಿದ್ದು, ಕಾರವಾರದಲ್ಲಿನ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಇವುಗಳನ್ನು ನಿಯೋಜಿಸಲಾಗುವುದು. 3 ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತೆಗೆ ಸಂಬಂಧಿತ ಸಂಪುಟ ಸಭೆಯಲ್ಲಿ ಪ್ರಕ್ರಿಯೆಗೆ ಒಪ್ಪಿಗೆ ನೀಡಲಾಗಿತ್ತು.
ಈ ಯುದ್ಧ ವಿಮಾನದ ಪೂರೈಕೆಯು 2029ರ ಅಂತ್ಯದಲ್ಲಿ ಆರಂಭವಾಗಲಿದ್ದು, 2031ರೊಳಗೆ ಪೂರ್ಣಗೊಳ್ಳಲಿದೆ. ವಿಶ್ವದಲ್ಲಿ ನೌಕಾಸೇನೆಗಳು ಬಳಸುತ್ತಿರುವ ಅತ್ಯಾಧುನಿಕ ‘ವಿಮಾನಗಳಲ್ಲಿ ರಫೇಲ್ ಕೂಡ ಒಂದು. ಈ ವಿಮಾನಗಳಿಗೆ ದೇಶೀಯವಾಗಿ ನಿರ್ಮಿತ. ಅಸ್ತ್ರ ಮತ್ತು ರುದ್ರಂ ಕ್ಷಿಪಣಿಗಳನ್ನು ಅಳವಡಿಸುವ ಉದ್ದೇಶ ಭಾರತಕ್ಕಿದೆ. ಭಾರತದ ವಾಯುಸೇನೆಗೆ ಈಗಾಗಲೇ ರಫೇಲ್ -ಸಿ ವಿಮಾನಗಳು ಸೇರಿವೆ.

