71
ಉತ್ತರಕಾಶಿ : ಮೇಘಸ್ಫೋಟದಿಂದ ತತ್ತರಿಸಿದ ಉತ್ತರ ಕಾಶಿಯ ನೆರೆ ಬಾಧಿತ ಧರಾಲಿ ಗ್ರಾಮದಲ್ಲಿ ಬುಧವಾರ ಒಂದು ಮೃತದೇಹ ಪತ್ತೆಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದೇ ವೇಳೆ 190 ಜನರನ್ನು ಸುರಕ್ಷಿತ ಸ್ಥಳಾಂತರ ಮಾಡಲಾಗಿದೆ.
ಕೇರಳದ 28 ಸದಸ್ಯರ ಪ್ರವಾಸಿ ಗುಂಪು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸವಾಲಿನ ಪರಿಸ್ಥಿತಿಯಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಾರ್ಸಿಲ್ ಎಂಬಲ್ಲಿ ಸೇನಾ ಶಿಬಿರದಲ್ಲಿದ್ದ 11 ಯೋಧರು ಭೂಕುಸಿತದಿಂದಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಯೋಧರನ್ನು ರಕ್ಷಿಸಲು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ರಕ್ಷಣಾ ಕಾರ್ಯಕ್ಕೆ ವೇಗ :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈ ಜನರ ಸ್ಥಳಾಂತರಿಸುವಿಕೆ ಮತ್ತು ಅವರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸೇನಾ ಸಿಬ್ಬಂದಿ ಹರಸಾಹಸಪಡುತ್ತಿದೆ. ಹಠಾತ್ ಪ್ರವಾಹದ ನಂತರ ರಸ್ತೆಯಿಂದ ಅವಶೇಷಗಳನ್ನು ತೆರವುಗೊಳಿಸಲು ಅಗೆಯುವ ಯಂತ್ರವನ್ನು ಬಳಸಲಾಗುತ್ತಿದೆ

