ಭುವನೇಶ್ವರ : ಸ್ವಾತಂತ್ರ್ಯದ ಕುರಿತು ಭಾರತೀಯರು ಸಂತೃಪ್ತರಾಗಿ ಇರಬಾರದು. ನಮ್ಮ ಪೂರ್ವಜರು ಅಪ್ರತಿಮ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟರು. ಅದನ್ನು ಜೀವಂತವಾಗಿರಿಸಲು ನಾವೂ ಅವರಂತೆಯೇ ಭಾರತೀಯ ಧರ್ಮ ಮತ್ತು ಬುದ್ದಿವಂತಿಕೆಯಿಂದ ಶ್ರಮಿಸಬೇಕು ಮತ್ತು ತ್ಯಾಗ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ.ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಸಮೃದ್ಧಿ ಮತ್ತು ಶಾಂತಿಗಾಗಿ ನಾವು ಕೊಡುಗೆ ನೀಡಬೇಕು. ಸಂಘರ್ಷಭರಿತ ಜಗತ್ತಿಗೆ ಮಾರ್ಗದರ್ಶನ ನೀಡಬಲ್ಲ ವಿಶ್ವ ಗುರು ಮತ್ತು ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ನಾವೂ ನಮ್ಮ ಪೂರ್ವಜರಂತೆ ಶ್ರಮ ವಹಿಸಬೇಕು ಮತ್ತು ತ್ಯಾಗಗಳನ್ನು ಮಾಡಬೇಕು ಎಂದು ಭಾಗ್ವತ್ ಹೇಳಿದ್ದಾರೆ.
ಭುವನೇಶ್ವರದ ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮಾತನಾಡಿದ ಅವರು, ಸ್ವತಂತ್ರ ಭಾರತ, ಸಂಪೂರ್ಣ ವಿಶ್ವದ ಜವಾಬ್ದಾರಿಯನ್ನೂ ಹೊಂದಿದೆ. ಕಳೆದ 2,000 ವರ್ಷಗಳಿಂದ ಜಗತ್ತು ಬಗೆಹರಿಸಲಾಗದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಭಾರತೀಯ ಧರ್ಮವನ್ನು ಇತರರೊಂದಿಗೆ ಹಂಚುವ ಮೂಲಕ ವಿಶ್ವದಲ್ಲಿ ಶಾಂತಿ ಮತ್ತು ಸಂತೋಷವನ್ನು ಕರೆತರಲು ಭಾರತ ಪ್ರಯತ್ನಿಸುತ್ತಿದೆ. ಭಾರತ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

