202
ಇಸ್ಲಾಮಾಬಾದ್ : ಲಷ್ಕರ್-ಎ-ತೊಯ್ದಾ ಉಗ್ರ ಸಂಘಟನೆ ಮುಖ್ಯಸ್ಥನಾದ ಹಫೀಜ್ ಸಯೀದ್‌ನ ಸಂಬಂಧಿ ಹಾಗೂ 2023ರ ರಜೌರಿ ದಾಳಿ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳ ಹಿಂದಿನ ಮಾಸ್ಟರ್ ಮೈಂಡ್ ಅಬು ಖತಲ್ ಪಾಕಿಸ್ತಾನದಲ್ಲಿ ಅನಾಮಿಕರಿಂದ ಹತನಾಗಿದ್ದಾನೆ. ಈ ರೀತಿ ಪಾಕ್‌ನಲ್ಲಿ ಅನಾಮಿಕರ ಗುಂಡಿಗೆ ಬಲಿಯಾದ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಸಂಖ್ಯೆ ಈಗ 26 ಕ್ಕೇರಿದೆ.
ಪಾಕ್‌ನ ಜೀಲಂ ಜಿಲ್ಲೆ ದಿನಾ ಪ್ರದೇಶದಲ್ಲಿ ಸಾಗುತ್ತಿದ್ದಾಗ ರಾತ್ರಿ 7.00ರ ಹೊತ್ತಿಗೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಖತಲ್ ಹತನಾಗಿದ್ದಾನೆ. ಘಟನೆಯಲ್ಲಿ ಉಗ್ರ ಖತಲ್ ಹಾಗೂ ಆತನ ಒಬ್ಬ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 25ಕ್ಕೂ ಹೆಚ್ಚು ಉಗ್ರರು ಪಾಕಿಸ್ತಾನದ ವಿವಿಧ ಭಾಗಗಳಲ್ಲಿ ಅನಾಮಿಕ ವ್ಯಕ್ತಿಗಳಿಂದ ಗುಂಡೇಟು ತಿಂದು ಸಾವನ್ನಪ್ಪಿದ್ದರು.

