Home » ಎಪ್ರಿಲ್‌ 01 : ಮೂರ್ಖರ ದಿನಾಚರಣೆ
 

ಎಪ್ರಿಲ್‌ 01 : ಮೂರ್ಖರ ದಿನಾಚರಣೆ

ಬದುಕನ್ನು ಸಂಭ್ರಮಿಸಲು ಪೆದ್ದುತನವೂ ಇರಬೇಕು

by Kundapur Xpress
Spread the love

ನಕ್ಕರ ರೋಗಿಲ್ಲಂತೆ.. ಅದಕ್ಕೆ ದ.ರಾ. ಬೇಂದ್ರೆ ಹೀಗೊಂದ್ ಮಾತು ಹೇಳ್ತಾರೆ…

ನಕ್ಕ್ ಸಾಯ್ರೋ ಎಲ್ಲಾ ನಕ್ಕ್ ಸಾಯರಿ
ನಕ್ಕ್ ಸತ್ರೆ ನೀವೆಲ್ಲಾ ನಕ್ಷತ್ರ ಆಗ್ತೀರಿ…
ಇರೋ ತನಕ ದುಡಿ ಇದ್ದಾಗ ಕುಂತ್ ಕುಡಿ ಸಾವು ಬಂತ ನಡಿ ಇಷ್ಟೇ ಜೀವನ….

ಹೌದು, ಇಂದು ಏಪ್ರಿಲ್ 01 ಮೂರ್ಖರ ದಿನ. ಅಂದರೇ ಬದುಕನ್ನು ಸಂಭ್ರಮಿಸಲು ಪೆದ್ದುತನವೂ ಇರಬೇಕು ಎಂದು ತೋರಿಸುವ ದಿನ. ಇಂತಹ ಮೂರ್ಖರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟು ಮೂರ್ಖರ ದಿನಾಚರಣೆ ಆಚರಿಸುವ ಸಂಪ್ರದಾಯ.

ಅದೇನೇ ಹಿನ್ನೆಲೆಯಲ್ಲಿ ಮೂಡಿ ಬಂದಿದ್ದರೂ ಅದರ ಉದ್ದೇಶ ಕ್ಷಣಿಕವಾದರೂ ಸರಿ, ಕೆಲವೊಮ್ಮೆ ನಕ್ಕು ಹಗುರಾಗುವ ಎಂಬ ಉದಾತ್ತ ಆಶಯವನ್ನೇ ಹೊಂದಿರುತ್ತದೆ. ಹೀಗೆ ಬದುಕನ್ನು ಸಂಭ್ರಮಿಸಲು ಪೆದ್ದುತನವೂ ಇರಬೇಕು. ಆದರೆ ನಗಿಸುವ ಭರದಲ್ಲಿ ಬೇರೆಯವರ ಮನಸ್ಸಿಗೆ ನೋವಾಗುವಂತೆ ಅವರ ದೈಹಿಕ ನ್ಯೂನತೆಗಳನ್ನು ಎತ್ತಿ ಆಡುವುದಾಗಲಿ ಬಣ್ಣ, ಕಂಠ, ಬಡತನವನ್ನು ಟೀಕಿಸುವುದಾಗಲೀ ಸರ್ವಥಾ ಸಲ್ಲದು.

ಅಂದ ಹಾಗೆ ಹಿಂದೆ ಒಂದು ವರ್ಷ ಏಪ್ರಿಲ್ ಒಂದರಂದು ಏನಾಯ್ತು ಗೊತ್ತಾ..?
ಮನೆಯೊಂದರಲ್ಲಿ ಆಭರಣ ಕಳ್ಳತನವಾಯಿತು. ಕಳ್ಳನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಏಪ್ರಿಲ್ 01ರ ಸಂದರ್ಭವಾಗಿ ಮನೆಯವರನ್ನು ಫೂಲ್ ಮಾಡಲು ತಮಾಷೆಗಾಗಿ ಈ ಕಳ್ಳತನ ಮಾಡಿದೆ ಅಷ್ಟೇ ಎಂದು ಮುಗುಳ್ನಕ್ಕನಂತೆ.! ಹಾಸ್ಯಪ್ರಿಯರಾದ ನ್ಯಾಯಾಧೀಶರು ನಗುತ್ತಾ “ತಮಾಷೆಗಾಗಿ ಮಾಡಿದ ಈ ಕಳ್ಳತನಕ್ಕೆ ಶಿಕ್ಷೆ ಏನೆಂದರೆ, ಬರುವ ಎಪ್ರಿಲ್ 01ನೇ ತಾರೀಖಿನವರೆಗೆ ಜೈಲಿನಲ್ಲಿದ್ದು ತಮಾಷೆಯಾಗಿ ನಗುನಗುತ್ತಾ ಕಾಲ ಕಳಿ” ಎಂದು ತೀರ್ಪು ನೀಡಿದರು.

ಸೃಷ್ಟಿಕರ್ತ ಹೃದಯಹೀನನಲ್ಲ. ಮಹಾನ್ ಬುದ್ದಿವಂತರ ನಡುವೆ ಕೆಲವರಾದರೂ ದಡ್ಡರನ್ನು ಅಥವಾ ಪೆದ್ದರನ್ನು ಅಥವಾ ಹಾಗೆ ನಟಿಸುವವರನ್ನೂ ಸೃಷ್ಟಿಸಿ, ಹೋಗಿ ಭೂಲೋಕದಲ್ಲಿ ಇದ್ದಷ್ಟು ದಿನ ಅಷ್ಟಿಷ್ಟು ನಿಮ್ಮ ಪೆದ್ದುತನದಿಂದ ವಾತಾವರಣವನ್ನು ಹಗುರವಾಗಿಸಿ ಬನ್ನಿ ಎಂದು ಕಳಿಸಿರುತ್ತಾನೆ. ಅವರು ಸುತ್ತುಮುತ್ತಲಿನವರನ್ನು ಹಗುರವಾಗಿರಿಸುತ್ತಾರೆ. ಅದರರ್ಥ ಅವರು ಪೆದ್ದರೋ ಮೂರ್ಖರೋ ಅಲ್ಲ. ಬೇರೆಯವರನ್ನು ನಗಿಸಲಿಕ್ಕೆ ತಮ್ಮನ್ನು ತಾವೇ ನಗೆಪಾಟಲು ಮಾಡಿಕೊಳ್ಳುವುದು. ಉದಾಹರಣೆಗೆ ಬೀರಬಲ್, ತೆನಾಲಿರಾಮ ಇವರೆಲ್ಲ ಬುದ್ದಿವಂತರೇ. ಆದರೆ ರಾಜನ ಆಸ್ಥಾನದಲ್ಲಿ ಇಂತಹ ವಿದೂಷಕರು ಇದ್ದರೇ ರಾಜಕೀಯ ಗಾಂಭೀರ್ಯಕ್ಕೆ, ನಗುವಿನ ಲೇಪನದಿಂದ ಪರಿಸ್ಥಿತಿಯನ್ನು ಹಗುರವಾಗಿಸಿಕೊಳ್ಳಲು ಸಾಧ್ಯವಿದೆ.

ಹಾಗೆಯೇ ಹಾಸ್ಯನಟರೊಬ್ಬರು ತಮ್ಮ ಶಾಲಾ ದಿನದ ಅನುಭವವನ್ನು ಹೀಗೇ ಹೇಳುತ್ತಾರೆ:- ನಾನಿರುವ ತರಗತಿಯಲ್ಲಿ ಮೇಷ್ಟ್ರು ನನ್ನನ್ನು ನಿಲ್ಲಿಸಿಕೊಂಡು ಗೌರವಿಸಿಕೊಂಡೇ ಪಾಠ ಮಾಡುತ್ತಿದ್ದರು. ನಾನು ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಯಾಗಿದ್ದರಿಂದ ಅಧ್ಯಾಪಕರು ನನ್ನನ್ನು ಎಷ್ಟೋ ಬಾರಿ ಅಧ್ಯಾಪಕರ ವಿಶ್ರಾಂತಿ ಕೊಠಡಿಗೆ ಕರೆಸಿ ಸನ್ಮಾನಿಸಿದ್ದುಂಟು. ಕೆಲವೊಂದು ಸಂದರ್ಭಗಳಲ್ಲಿ ನನಗೆ ಎಲ್ಲ ಮಾಹಿತಿ ಇದೆ ಎಂದು ಅವರಿಗೆ ಉತ್ತಮ ವಿಶ್ವಾಸ ಇರುವ ಸಮಯದಲ್ಲಿ “ನೀನು ಯಾಕೆ ಶಾಲೆಗೆ ಬರುವುದು?” ಅಂತೆಲ್ಲಾ ಕೇಳಿದ್ದುಂಟು. ಇದು ತನ್ನನ್ನೇ ತಾನು ವಿಡಂಬಿಸಿಕೊಳ್ಳುವ ಒಂದು ಸುಂದರ ಸುಸಂದರ್ಭ.

ದುರಂತ ಕಥೆಗಳಿಂದ ತುಂಬಿದ ನಮ್ಮ ಕಾವ್ಯ, ಪುರಾಣಗಳಲ್ಲಿ ಅಷ್ಟಿಷ್ಟು ದಡ್ಡತನದಿಂದ ನಮ್ಮನ್ನು ಮನರಂಜಿಸಲೆಂದೇ ಜನ್ಮ ತಾಳಿದವರು ಉತ್ತರಕುಮಾರ, ಶಕಾರನಂತ ಪೆದ್ದು ಮುದ್ದುಮಣಿಗಳು. ‘ಮೃಚ್ಛಕಟಿಕ’ ನಾಟಕದಲ್ಲಿ ಬರುವ ಶಕಾರನ ಪಾತ್ರವಂತೂ ತನ್ನ ದಡ್ಡತನ ಹಾಗೂ ಶಠತ್ವದಿಂದ ಅಚ್ಚಳಿಯದೆ ಕೂತುಬಿಟ್ಟಿದ್ದಾನೆ. ಅವನಿಗೆ ಸಕಾರವೆಲ್ಲ ಶಕಾರವೇ. ಸರಳವಾಗಿ ಹೇಳಬೇಕೆಂದರೆ “ಅವನೊಬ್ಬ ಸಂಸ್ಕೃತ ಹಾಸ್ಯಗಾರ, ಆದರೆ ಸಾಧು  ಸ್ವಾಭಾವದವನಲ್ಲ”.

ಮಹಾಭಾರತದ ಯುದ್ಧದಲ್ಲಿ ದ್ರೋಣಾಚಾರ್ಯನು ಅಜೇಯನಾಗಿದ್ದನು. ಪಾಂಡವರು ಅವನಿಂದ ಹತಾಶರಾಗಿದ್ದರು. ಕೃಷ್ಣನು ತಿಳಿದಿದ್ದ..”ನಂಬಿಕೆಯೇ ಮನುಷ್ಯನ ದೊಡ್ಡ ಬಲಹೀನತೆ” ಆತನ ಯೋಜನೆಯ ಪ್ರಕಾರ, ದ್ರೋಣಪುತ್ರ ಅಶ್ವತ್ಥಾಮ ಸಾವನ್ನಪ್ಪಿದುದಾಗಿ ವದಂತಿ ಹಬ್ಬಿಸಲಾಗುತ್ತದೆ.
ದ್ರೋಣಾಚಾರ್ಯರು ಕೇಳಿದಾಗ ಧರ್ಮರಾಜನು ಜಾಣ್ಮೆಯಿಂದ ಹೇಳಿದನು “ಅಶ್ವತ್ಥಾಮ ಹತಃ… ಕುಂಜರ”. ಕುಂಜರ ಎಂದು ಹೇಳುವಾಗ ಕೃಷ್ಣ ಶಂಖ ಊದಿದ್ದರಿಂದ ದ್ರೋಣನಿಗೆ ಸಂಪೂರ್ಣ ವಾಕ್ಯ ಕೇಳಲಿಲ್ಲ.
ದ್ರೋಣನ ಪೆದ್ದುತನ ನೋಡಿ ತನ್ನ ಮಗ ಚಿರಂಜೀವಿ ಎಂದು ತಿಳಿದರೂ ಆ ಸಮಯದಲ್ಲಿ ಧರ್ಮರಾಯನ ಮಾತನ್ನು ನಂಬಿದ. ಅಂದರೆ ‘ಏಪ್ರಿಲ್ ಫೂಲ್’ ಆದ. ಮೂರ್ಖನಾದ ಪರಿಣಾಮ ತನ್ನ ಪ್ರಾಣವನ್ನೇ ತ್ಯಾಗ ಮಾಡಬೇಕಾಯ್ತು. ಇವೆಲ್ಲ ಮೂರ್ಖತನದ ಪರಮಾವಧಿ.
 ಆದರೆ ದ್ರೋಣನಂತೆ ಶತಮೂರ್ಖನಾಗುವುದು ಸರಿಯಲ್ಲ. ಬದುಕಿನ ಭಾವದ ಭಾರವನ್ನು ಇಂಗಿಸಲು ನಗುವುದೊಂದು ಸಾಧನ.

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ.
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ.

ಹಾಗಾಗಿ ಏಪ್ರಿಲ್ ಒಂದು ಅನ್ನುವುದು ಮೂರ್ಖರನ್ನಾಗಿಸುವುದು ಅಲ್ಲ ಮೂರ್ಖರಾಗುವುದು ಅಲ್ಲ. ಆದರೆ ಬದುಕಿನ ಭಾರವನ್ನು ಸ್ವಲ್ಪ ಹಗುರಾಗಿಸುವುದು. ಮೂರ್ಖರಾಗದೆ, ಇನ್ನೊಬ್ಬರಿಗೆ ನೋವುಂಟು ಮಾಡದೇ, ಇನ್ನೊಬ್ಬರ ಹೃದಯದ ಭಾರವನ್ನು ಲಘು ಹಾಸ್ಯದಿಂದ ಕಡಿಮೆ ಮಾಡೋಣ. ಎಲ್ಲರಿಗೂ ಶುಭವಾಗಲಿ

ಸ್ವರ್ಣ ಕುಂದಾಪುರ

 

Related Articles

error: Content is protected !!