199
ಮಹಿಳೆ ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ.
ಭಗವದ್ಗೀತೆಯ 10ನೇ ಅಧ್ಯಾಯದ 34ನೇ ಶ್ಲೋಕದಲ್ಲಿ ಭಗವಂತನೇ ಹೇಳಿದಂತೆ-
ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಈಗ ಸಾಕಷ್ಟು ಕಾನೂನುಗಳು ಬಳಕೆಯಲ್ಲಿವೆ. ಆದರೆ ಸ್ತ್ರೀ ಪರ ಕಾನೂನುಗಳ ದುರ್ಬಳಕೆಯೂ ನಮ್ಮ ಸಮಾಜದಲ್ಲಿ ಸಾಕಷ್ಟು ನಡೆಯುತ್ತಿದೆ. ಸಮಾಜದ ಮಧ್ಯದಲ್ಲಿಯೇ ಇದ್ದುಕೊಂಡು ತಾನು ಅನುಭವಿಸುವ ನೋವನ್ನು ನುಂಗಲೂ ಆಗದೆ ಉಗುಳಲೂ ಆಗದೆ ಕುಟಿಲ ಮಹಿಳೆಯರ ಕೈಯಲ್ಲಿ ಸಿಲುಕಿ ಒದ್ದಾಡುವ ಪುರುಷರೂ ಇದ್ದಾರೆ ಎಂಬುದನ್ನೂ ನಾವು ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಮಹಿಳಾ ದಿನಾಚರಣೆ, ಕಾನೂನು ಸಂರಕ್ಷಣೆ ಏನಿದ್ದರೂ ಸಮಾಜದ, ಆ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಬೇಕೇ ವಿನಾ ಸಮಾಜವನ್ನು ಸಂಸ್ಕಾರ ಶೂನ್ಯರನ್ನಾಗಿಸುವಂತೆ ಆಗಬಾರದು ಎಂಬುದೇ ನಮ್ಮೆಲ್ಲರ ಆಶಯ.
ಮಹಿಳೆ ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ.
ಹೆಣ್ಣನ್ನು “ಕ್ಷಮಯಾ ಧರಿತ್ರಿ” ಎಂದು ವಿಶೇಷಿಸಲಾಗಿದೆ. ಹೌದು ಆಕೆ … ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ…
ಮಂಗಲವೆ ಬಾರೆಂದು ಕರೆಯುವಾಕೆ… ಬಾಳ ಸುಳಿಯಲಿ ಬೆಳೆದು ತೋರುವಾಕೆ… ದಿನದಿನವು ನವಜಯವ ಕೋರುವಾಕೆ
ಪ್ರಸಿದ್ಧ ಕವಿ ಬೇಂದ್ರೆಯವರ ಕವನದ ಸಾಲುಗಳಿವು. ಸರ್ವರಿಗೂ ಶುಭವನ್ನೂ ಕ್ಷೇಮವನ್ನು ಹಾರೈಸುವವಳೂ ಅವಳೇ.
ಇಂದು ಮಾರ್ಚ್ 8. “ಅಂತರ್ರಾಷ್ಟ್ರೀಯ ಮಹಿಳಾ ದಿನ” ಮಹಿಳೆಯರಿಗಾಗಿಯೇ ಮೀಸಲಾಗಿರಿಸಿದ ಈ ದಿನವನ್ನು ಮಹಿಳೆಯರ ಮತದಾನದ ಹಕ್ಕು, ಲಿಂಗ ಸಮಾನತೆಯ ಹಕ್ಕು, ಸಾರ್ವಜನಿಕ ಹುದ್ದೆಯ ಹಕ್ಕು ಹೀಗೆ ಹತ್ತು ಹಲವು ಅಗತ್ಯತೆಗಳಿಗಾಗಿ ಅಥವಾ ಹೋರಾಟಕ್ಕಾಗಿ ಬಳಸಲಾಗಿದೆ.
1977ರ ಮಾರ್ಚ್ 8 ನ್ನು ವಿಶ್ವಸಂಸ್ಥೆಯಲ್ಲಿ ಪ್ರಪ್ರಥಮವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಅಂಗೀಕರಿಸಲಾಯಿತು. ರಾಷ್ಟ್ರೀಯ, ಜನಾಂಗೀಯ, ಭಾಷಾ, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ ವಿಭಾಗಗಳನ್ನು ಪರಿಗಣಿಸದೆ ಮಹಿಳೆಯರು ತಮ್ಮ ಸಾಧನೆಗಳಿಗಾಗಿ ಗುರುತಿಸಲ್ಪಡುವ ದಿನವೇ ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆ ಎಂದಾಗ ಮೊದಲು ಕಣ್ಣಿಗೆ ಕಟ್ಟುವ ಜೀವ “ಅಮ್ಮ”. ಹೊತ್ತವಳು ಹೆತ್ತವಳು ಕೈತುತ್ತನಿತ್ತವಳು ಹೊತ್ತುಗೊತ್ತಿಲ್ಲದೆಯೆ ತಾ ಸಲಹಿದವಳು ತುತ್ತನುಣ್ಣುವ ಮುನ್ನ ನೀನೊಮ್ಮೆ ನೆನೆಯವಳ ಬತ್ತದೊರತೆಯೇ ಅಮ್ಮ ಮೇಲಿನ ಮುಕ್ತಕದ ಸಾಲಿನಂತೆ ಆಕೆ ಪ್ರೀತಿಯಲ್ಲಿ, ಕರ್ತವ್ಯದಲ್ಲಿ, ಸಾಧನೆಯಲ್ಲಿ, ಎಲ್ಲದರಲ್ಲೂ ಸದಾ ಬತ್ತದ ಒರತೆಯೇ ಆಗಿದ್ದಾಳೆ.
ಭೂಮಿ ಮತ್ತು ಹೆಣ್ಣನ್ನು ಒಂದೇ ತೆರನಾಗಿ ಕಾಣುತ್ತದೆ ನಮ್ಮ ಸಂಸ್ಕೃತಿ. ಹೆಣ್ಣಿನ ತ್ಯಾಗ ಅದೆಷ್ಟೋ ಸಂಸಾರದ ಸಂತಸಕ್ಕೆ ಮೂಲಾಧಾರ. ಹೆಣ್ಣಿನ ಸಹನಾಶೀಲತೆಯೇ ನಮಗೆ ಶ್ರೀರಕ್ಷೆ ಎಂಬುವುದನ್ನು ಅರಿತುಕೊಂಡು, ಆಕೆಗೆ ಗೌರವ ನೀಡಿದಾಗಲೇ ಪ್ರಕೃತಿ ನಮ್ಮನ್ನು ಕ್ಷಮಿಸಿ ಹರಸಬಲ್ಲುದು. ಎಷ್ಟೊಂದು ಮಹಿಳೆಯರು ತಮ್ಮ ಅಂತಃಶಕ್ತಿಯ ಪ್ರೇರಣೆಯಿಂದಲೇ ಬಹಳಷ್ಟು ಸಾಧನೆಯನ್ನು ಮಾಡಿ ಯಶಸ್ಸಿನ ಶಿಖರವನ್ನು ತಲುಪಿದ್ದು ನಮ್ಮ ಕಣ್ಣ ಮುಂದೇ ಇದೆ.
ಮಹಿಳೆಯೇ ಇಲ್ಲದ ವಿಶ್ವವನ್ನು ಊಹಿಸಲು ಸಾಧ್ಯವೇ…? ಖಂಡಿತಾ ಇಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆ ನಿರ್ವಹಿಸುವ ಪಾತ್ರಗಳು ಹಲವು, ಹೆಗಲು ಕೊಡುವ ಜವಾಬ್ದಾರಿಗಳೂ ಹಲವು. ಮಹಿಳೆ ಪ್ರಕೃತಿಯಂತೆಯೇ ಸೃಷ್ಟಿಕರ್ತೆ. ಜೀವ ನೀಡುವವಳು ಆಕೆ, ಜೀವನಕ್ಕೆ ಶಕ್ತಿ ತುಂಬುವವಳು ಆಕೆ.
ಸನಾತನ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ಜ್ಞಾನ, ಧರ್ಮ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಜವಬ್ದಾರಿಯನ್ನು ನೀಡಲಾಗಿದೆ. ಹಾಗಾಗಿಯೇ *ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ | ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ’ || ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !*ಎಂದು ಮನುಸ್ಮೃತಿಯಲ್ಲಿ ಉಲ್ಲೇಖಸಲಾಗಿತ್ತು.
ಮಹಿಳೆಯರು ಇತ್ತೀಚಿಗಿನ ದಿನಗಳಲ್ಲಿ ಕಾನೂನಿನ ಆಧಾರದಲ್ಲಿಯೋ ಅಥವಾ ಸಾಧನೆಯ ಹಾದಿಯಿಂದಲೋ ಬಹಳಷ್ಟು ಎತ್ತರಕ್ಕೆ ಏರಿದ್ದಾರೆ. ಪುರುಷರ ಸಮನಾಗಿ ಅಥವಾ ಪುರುಷರಿಗಿಂತ ಒಂದು ಮೆಟ್ಟಿಲು ಮೇಲೆಯೇ ತಲುಪಿದ್ದಾರೆ ಎಂದರೆ ತಪ್ಪಾಗಲಾರದು. ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಬಲ್ಲವರು ಹೇಳಿದ್ದಾರೆ.
ಭಗವದ್ಗೀತೆಯ 10ನೇ ಅಧ್ಯಾಯದ 34ನೇ ಶ್ಲೋಕದಲ್ಲಿ ಭಗವಂತನೇ ಹೇಳಿದಂತೆ-
ಕೀರ್ತಿಃ ಶ್ರೀರ್ವಾಕ್ಚ ನಾರೀಣಾಮ್
ಸ್ಮೃತಿರ್ಮೇಧಾ ಧೃತಿಃ ಕ್ಷಮಾ॥
ಅರ್ಥಾತ್ ಸ್ತ್ರೀಯರಲ್ಲಿ ಕೀರ್ತಿ, ಶ್ರೀ, ಒಳ್ಳೆಯ ಮಾತು, ಸ್ಮೃತಿ, ಬುದ್ಧಿವಂತಿಕೆ, ಕ್ಷಮೆ ಎಲ್ಲವೂ ನಾನೇ ಆಗಿದ್ದೇನೆ ಎಂದ ಮೇಲೆ ಸ್ತ್ರೀಯರಲ್ಲಿ ಸಾಕ್ಷಾತ್ ಭಗವಂತನೇ ತಾನಿದ್ದುಕೊಂಡು ಆಕೆಯನ್ನು ದೈವೀ ಸ್ಥಾನಕ್ಕೆ ಏರಿಸಿದ್ದಾನೆ ಎಂದಲ್ಲವೆ ?ಚರಿತ್ರೆ ಪುಟಗಳನ್ನು ಅವಲೋಕಿಸಿದಾಗ
ಆಪತ್ಕಾಲದಲ್ಲಿ ಮಹಿಳೆ, ರಾಜ್ಯದ ಅಧಿಕಾರವನ್ನು ಹಿಡಿದು ರಾಜಸೂತ್ರವನ್ನು ನಡೆಸಿದವಳೆಂಬುದನ್ನು ಮರೆಯುವಂತಿಲ್ಲ. ಉದಾಹರಣೆಗೆ… ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದವರು. ಅವರೆಲ್ಲ ತಾವೇ ಸ್ವತಃ ಜನೋಪಯೋಗೀ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.
ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ ಎಂಬ ಕೀರ್ತಿ ಪಡೆದ “ಸರೋಜಿನೀ ನಾಯ್ಡು”, ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯ “ಪ್ರತಿಭಾ ಪಾಟೀಲ್” ಇವರೆಲ್ಲ ಹೊಂದಿರುವ ಶಿಕ್ಷಣ ಮತ್ತು ಅನುಭವಗಳು ಅವರನ್ನು ಯಶಸ್ವೀ ಮಹಿಳೆಯರ ಸ್ಥಾನದಲ್ಲಿ ನಿಲ್ಲಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಅತ್ಯಂತ ಸಣ್ಣವಯಸ್ಸಿನಲ್ಲಿ ಅಂತರಿಕ್ಷದಲ್ಲೇ ಭಸ್ಮವಾದ ಮಹಿಳೆ “ಕಲ್ಪನಾ ಚಾವ್ಲ”. ಆವರು ಕಂಡ ಕನಸು, ಅವರೊಳಗಿನ ಮಹತ್ತ್ವಾಕಾಂಕ್ಷೆಯ ತುಡಿತ, ಗುರಿಸಾಧನೆಯ ಹಠ ಅವರ ಕನಸು ಸಾಕಾರವಾಗಲು ಕಾರಣ.
ಹೆಣ್ಣು ಎಂಬ ಒಂದೇ ಕಾರಣಕ್ಕೆ ತನ್ನ ಎಲ್ಲ ಆತ್ಮಗೌರವವನ್ನೂ ಸ್ವಾಭಿಮಾನವನ್ನೂ ಬಿಟ್ಟು ಆಕೆ ಬದುಕಬೇಕೆಂಬ ಸಮಾಜದ ನಿರೀಕ್ಷೆಯೇ ನಮ್ಮೆಲ್ಲರ ಅಧಃಪತನಕ್ಕೆ ಮೂಲ ಕಾರಣ ಎಂದರೂ ತಪ್ಪಲ್ಲ. ಮನೆಯಲ್ಲಿ ಇರುವುದು ಅಥವಾ ಇರಬೇಕಾದುದು ಪತ್ನಿಯ ಆಯ್ಕೆಯೋ ಅನಿವಾರ್ಯತೆಯೋ ಆದಾಗ ಆ ಕುರಿತು ಗೌರವವಿರಲಿ. ಅವಳೊಬ್ಬ ವೈದ್ಯೆಯೋ ಪೈಲಟ್ಟೋ ಶಿಕ್ಷಕಿಯೋ ಆಗಿರಬಹುದಿತ್ತು, ಆದರೆ ಮನೆಮಂದಿ ಕಾಪಿಡಬೇಕಾದುದು ಆಕೆಯ ಆತ್ಮಗೌರವವನ್ನು. ಮನೆಯೊಳಗೆ ಅವಳ ಬಳೆಗಳ ಸದ್ದು ಮನೆಮಂದಿಗೆ ಅಕ್ಕರೆಯ ಲಾಲಿಯಾಗಲಿ. ಒಂದೊಮ್ಮೆ ಆ ಬಳೆಗಳು ಮೌನವಾದಾಗ ಅರ್ಥೈಸಿಕೊಳ್ಳಬೇಕಾದ ಬದ್ಧತೆಯನ್ನು ಮನೆಯೊಳಗಿನ ಮಂದಿ ಬೆಳೆಸಿಕೊಳ್ಳಲಿ.
ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಈಗ ಸಾಕಷ್ಟು ಕಾನೂನುಗಳು ಬಳಕೆಯಲ್ಲಿವೆ. ಆದರೆ ಸ್ತ್ರೀ ಪರ ಕಾನೂನುಗಳ ದುರ್ಬಳಕೆಯೂ ನಮ್ಮ ಸಮಾಜದಲ್ಲಿ ಸಾಕಷ್ಟು ನಡೆಯುತ್ತಿದೆ. ಸಮಾಜದ ಮಧ್ಯದಲ್ಲಿಯೇ ಇದ್ದುಕೊಂಡು ತಾನು ಅನುಭವಿಸುವ ನೋವನ್ನು ನುಂಗಲೂ ಆಗದೆ ಉಗುಳಲೂ ಆಗದೆ ಕುಟಿಲ ಮಹಿಳೆಯರ ಕೈಯಲ್ಲಿ ಸಿಲುಕಿ ಒದ್ದಾಡುವ ಪುರುಷರೂ ಇದ್ದಾರೆ ಎಂಬುದನ್ನೂ ನಾವು ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಮಹಿಳಾ ದಿನಾಚರಣೆ, ಕಾನೂನು ಸಂರಕ್ಷಣೆ ಏನಿದ್ದರೂ ಸಮಾಜದ, ಆ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಬೇಕೇ ವಿನಾ ಸಮಾಜವನ್ನು ಸಂಸ್ಕಾರ ಶೂನ್ಯರನ್ನಾಗಿಸುವಂತೆ ಆಗಬಾರದು ಎಂಬುದೇ ನಮ್ಮೆಲ್ಲರ ಆಶಯ.
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
ಸ್ವರ್ಣ ಕುಂದಾಪುರ

