Home » ಮಿಂಚಿನ ಕ್ರಾಂತಿಪುಷ್ಪ – ಬಿರ್ಸಾ ಮುಂಡಾ
 

ಮಿಂಚಿನ ಕ್ರಾಂತಿಪುಷ್ಪ – ಬಿರ್ಸಾ ಮುಂಡಾ

by Kundapur Xpress
Spread the love

ಭಾರತದ ಸ್ವಾತಂತ್ರ್ಯ ಹೋರಾಟ ಎಂದರೆ ಕೇವಲ ಇತಿಹಾಸವಲ್ಲ—ಅದು ತಾಯಿ ಭಾರತಿಯ ಮಣ್ಣಿನ ಸುಗಂಧದಲ್ಲಿ ಬೆಳೆದ ಧೈರ್ಯ,ಜನರ ಉಸಿರಲ್ಲಿ ಹುಟ್ಟಿದ ಕಿಚ್ಚು.ಬ್ರಿಟಿಷರ ದರ್ಪವನ್ನು ಮುರಿಯಲು ಅಣಬೆಗಳಂತೆ ಹಲವು ನಾಯಕರು ಹುಟ್ಟಿಕೊಂಡರು.ಆದರೆ ಈ ದೇಶದ ಸ್ವಾತಂತ್ರ್ಯದ ನಿರೀಕ್ಷೆಯಲ್ಲಿ ಕೇವಲ ನಗರಗಳ ನಾಯಕರು ಮಾತ್ರ ಇರಲಿಲ್ಲ.ದೂರದ ಕಾಡುಗಳಲ್ಲಿ, ಬೆಟ್ಟದ ನಾಡುಗಳಲ್ಲಿ, ಬೆಳಕನ್ನೇ ಕಾಣದ ಹಳ್ಳಿಗಳಲ್ಲೂ ಸ್ವಾತಂತ್ರ್ಯ ಎಂಬ ಪದ ಬರುವ ಮುಂಚೆಯೇ ಪ್ರತಿ ಉಸಿರಿನಲ್ಲೂ ಸ್ವಾಭಿಮಾನದ ಕಿಡಿ ಹೊತ್ತಿದ್ದ ಯೋಧರಿದ್ದರು.ಅವರಲ್ಲಿ ಮಿಂಚಿನಂತೆ ಘರ್ಜಿಸಿದ ಯೋಧ —ಬಿರ್ಸಾ ಮುಂಡಾ.
ಮುಂಡಾ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದ ಇವರು ಜನಿಸಿದ್ದು 1875ರ ನವೆಂಬರ್ 15 ರಂದು, ಇಂದಿನ ಝಾರ್ಖಂಡ್ ರಾಜ್ಯದ ಉಲಿಹತು ಎಂಬ ಗ್ರಾಮದಲ್ಲಿ. ತಂದೆ ಸುಗನಾ ಮುಂಡಾ ಮತ್ತು ತಾಯಿ ಕಾರ್ಮಿ ಹತು.ಬಡತನದಲ್ಲೇ ಬದುಕುತ್ತಿದ್ದರೂ, ಮಣ್ಣಿನ ಗೌರವ ಮತ್ತು ದುಡಿಮೆಯ ಮೌಲ್ಯವನ್ನು ಮಕ್ಕಳಿಗೆ ಕಲಿಸಿದ ಸರಳ ಆದಿವಾಸಿ ದಂಪತಿ. ಬಡತನದ ಕಾರಣದಿಂದ ಇವರ ಕುಟುಂಬವು, ಜೀವನೋಪಾಯಕ್ಕಾಗಿ ಬೇರೆ ಬೇರೆ ಕಡೆ ಸ್ಥಳಾಂತರಗೊಳ್ಳಬೇಕಾಗಿತ್ತು. ನಂತರ ಇವರ ಕುಟುಂಬವು ಚೋಟಾನಾಗ್ಪುರದ ಬೆಟ್ಟಪ್ರದೇಶದ ಚಾಲ್ಕಡ್ ನಲ್ಲಿ ನೆಲೆನಿಂತಿತು. ಅಲ್ಲಿ ಇವರ ಬಾಲ್ಯ ಕಳೆಯಿತು.
ಹೊಲದ ಮಣ್ಣಿನ ಸುಗಂಧ, ಕಾಡಿನ ಪಕ್ಷಿಗಳ ಕೂಗು, ನದಿಯ ಮೊರೆತ … ಇವೆಲ್ಲವೂ ಅವನ ಶಿಕ್ಷಕರು. ದುಬಾರಿಯ ಪುಸ್ತಕಗಳು ಇರಲಿಲ್ಲ, ಆದರೆ ಪ್ರಕೃತಿಯ ಪಾಠಗಳಿದ್ದವು; ಮಾರ್ಗದರ್ಶಕರು ಇರಲಿಲ್ಲ, ಆದರೆ ಹೋರಾಟವನ್ನು ಕಲಿಸಿದ ಜೀವನದ ಕಷ್ಟವಿತ್ತು.
ಕೊಳಲು ಊದಲು ಇಷ್ಟಪಟ್ಟ ಸಣ್ಣ ಬಿರ್ಸಾ, ಒಂದು ಕೈಯಲ್ಲಿ ಕೊಳಲು, ಮತ್ತೊಂದು ಕೈಯಲ್ಲಿ ಚಿಗುರು ಕನಸುಗಳನ್ನು ಹಿಡಿದು ಕಾಡಿನಲ್ಲಿ ಓಡಾಡುತ್ತಿದ್ದ ಮಗುವಾಗಿದ್ದರೂ, ಹೃದಯದಲ್ಲಿ ಒಂದು ಬೆಂಕಿ ಬೆಳೆದಿತ್ತು — “ಮಣ್ಣನ್ನು ಕಾಪಾಡಬೇಕು, ನನ್ನ ಜನರನ್ನು ಕಾಪಾಡಬೇಕು” ಎಂಬ ನಿಶ್ಶಬ್ದ ಪ್ರತಿಜ್ಞೆಯ ಜ್ವಾಲೆ.
ಜಯಪಾಲ್ ನಾಗ್ ಎನ್ನುವವರು ನಡೆಸುತ್ತಿದ್ದ ಸಾಲ್ಗಾ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ಓದಿನಲ್ಲಿ ಚುರುಕಾಗಿದ್ದ ಅವರನ್ನು ಜಯಪಾಲ್ ನಾಗ್ ರವರು ಜರ್ಮನ್ ಮಿಷನ್ ಶಾಲೆಯಲ್ಲಿ ಓದಲು ಮನವೊಲಿಸಿದರು. ಅಲ್ಲಿ ಕ್ರೈಸ್ತ ಧರ್ಮದ ಪ್ರಭಾವ ಕಂಡು, ಶೀಘ್ರದಲ್ಲೇ ಶಾಲೆಯನ್ನು ತ್ಯಜಿಸಿದರು. ತಮ್ಮ ಜನಾಂಗದ ಮೂಲ ಸಂಸ್ಕೃತಿ, ನಂಬಿಕೆ, ಹಾಗೂ ದೇವರನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು. ತಮ್ಮ ಜನಾಂಗದವರಿಗೆ ತಮ್ಮ ದೇವರಾದ ಸಿಂಗ್ಬೊಂಗಾ ನಲ್ಲಿ ಭಕ್ತಿ ಇಡಬೇಕು, ಶುದ್ಧಜೀವನ ನಡೆಸಬೇಕು, ಮದ್ಯಪಾನ ಮತ್ತು ಅಸತ್ಯದಿಂದ ದೂರವಿರಬೇಕು ಎಂದು ಬೋಧಿಸಿದರು. ಕ್ರಾಂತಿಕಾರಿ ಮಾತ್ರವಲ್ಲ; ಸಾಮಾಜಿಕ ಸುಧಾರಕರೂ ಹೌದು.ಬಿರ್ಸಾ ಜನರಿಗೆ ಮದ್ಯಪಾನ ತ್ಯಾಗ, ಶುದ್ಧ ಜೀವನ,ಅರಣ್ಯ ಸಂರಕ್ಷಣೆ,ಮಹಿಳೆಯರ ಗೌರವ, ಇವುಗಳ ಮಹತ್ವವನ್ನು ಬೋಧಿಸುತ್ತಿದ್ದರು. ಅವರನ್ನು ಧ್ಯಾನಿ, ಹೀಲರ್, ಪ್ರವಚನಕಾರ ಎಂದೂ ಕರೆಯಲಾಗುತ್ತಿತ್ತು.
ಆ ಸಮಯದಲ್ಲಿ ಬ್ರಿಟಿಷರು ಅರಣ್ಯ ಕಾನೂನುಗಳನ್ನು ಜಾರಿಗೆ ತಂದು, ಭೂಮಿ ಹಾಗೂ ಸಂಪನ್ಮೂಲಗಳ ಮೇಲೆ ತಮ್ಮ ಹಕ್ಕು ಸ್ಥಾಪಿಸಿದರು. ಸ್ಥಳೀಯ ಜಮೀನ್ದಾರರು ಹಾಗೂ ಕ್ರೈಸ್ತ ಮಿಷನರಿಗಳು ಆದಿವಾಸಿಗಳನ್ನು ಶೋಷಿಸುತ್ತಿದ್ದರು. ಬುಡಕಟ್ಟು ಜನರ ಮೇಲೆ ನಿರಂತರ ನಡೆಯುತ್ತಿದ್ದ ದೌರ್ಜನ್ಯವನ್ನು ಬಾಲಕನಾಗಿದ್ದಾಗ ಸ್ವಯಂ ಅನುಭವಿಸಿದ, ಮತ್ತು ಕೆಲಸಕ್ಕಾಗಿ ಸಂಚರಿಸುವ ಸಂದರ್ಭದಲ್ಲಿ ಸಮುದಾಯವು ಎದುರಿಸುತ್ತಿದ್ದ ವಿಭಿನ್ನ ತೊಂದರೆಯಿಂದಾಗಿ, ಅವರು ಜಾಗೃತರಾದರು. ಜನರನ್ನು ಹಿಂಸಿಸಲು ಮತ್ತು ದೇಶದ ಸಂಪತ್ತನ್ನು ವಿದೇಶಕ್ಕೆ ಕೊಂಡೊಯ್ಯಲು ಬ್ರಿಟಿಷ್ ಕಂಪನಿಯು ಭಾರತಕ್ಕೆ ಬಂದಿರುವ ಸತ್ಯವನ್ನು ಅರಿತುಕೊಂಡ ಇವರಲ್ಲಿ, ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡುವ ಕಿಚ್ಚು ಮೈದಳೆಯಿತು. ಬಿರ್ಸಾ ಮುಂಡಾ ಅವರು ತಮ್ಮ ಪ್ರಭಾವಶಾಲಿ ವ್ಯಕ್ತಿತ್ತ್ವ , ಸ್ಫೂರ್ತಿದಾಯಕ ಭಾಷಣ ಹಾಗೂ ಬೋಧನೆಗಳ ಮೂಲಕ ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರಕ ಶಕ್ತಿಯಾದರು.
ಬಿರ್ಸಾ ಮುಂಡಾ ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ.
ಅಡಿವಾಸಿಗಳ ಭೂ ಹಕ್ಕುಗಳನ್ನು ಕಾಪಾಡಲು ದೇಶದ ಮೊದಲ ದೊಡ್ಡ ಚಳುವಳಿಯೊಂದನ್ನು ನಡೆಸಿದರು.
ಬಿರ್ಸೈತ್ ಎಂಬ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಗೆ ಚಾಲನೆ ನೀಡಿದರು. ಬ್ರಿಟಿಷರು ಮತ್ತು ಜಮೀನ್ದಾರರಿಗೆ ತೆರಿಗೆ ಕೊಡದಿರುವುದು, ಭೂಮಿಯು ನಮ್ಮದೇ ಎಂದು ತಿಳಿಯುವುದು, ದೇವರಲ್ಲಿ ಶ್ರದ್ಧೆ ಮತ್ತು ಏಕತೆ ಸಾಧಿಸುವುದು ಈ ಚಳುವಳಿಯ ಮುಖ್ಯ ಆಶಯವಾಗಿತ್ತು. ಇದರಿಂದಾಗಿ ಜನರು ಅವರಿಗೆ ಧರ್ತಿ ಆಬಾ ಅಂದರೆ ಭೂಮಿಯ ತಂದೆ ಎಂದು ಗೌರವಿಸಿದರು.

ಅವರು ಜನರನ್ನು ಬ್ರಿಟಿಷ್ ಅಧಿಕಾರಿಗಳು, ಪೊಲೀಸ್ ಠಾಣೆಗಳು, ಮಿಷನರಿಗಳು ಹಾಗೂ ಜಮೀನ್ದಾರರ ವಿರುದ್ಧ ಹೋರಾಡಲು ಪ್ರೇರೇಪಿಸಿ, 1899 ರಲ್ಲಿ ಉಳ್ಗುಲಾನ್ ಎಂದು ಕರೆಯಲ್ಪಟ್ಟ “ಮಹಾಬಂಡೆ” ಅಥವಾ “ಮಹಾಗದ್ದಲ” ವನ್ನು ಪ್ರಾರಂಭಿಸಿದರು.
” ಅಬುವಾ ರಾಜ ಸೆತರ್ ಜಾನಾ, ಮಹಾರಾಣಿ ರಾಜ ತೂಂಡು ಜಾನಾ”
ಅಂದರೆ, “ಮಹಾರಾಣಿಯ ರಾಜ್ಯ ಹೋಗಲಿ, ನಮ್ಮ ರಾಜ್ಯ ಬರಲಿ”
ಎಂದು ಘೋಷಣೆ ಕೂಗಿ ಜನರಲ್ಲಿ ಸ್ವಾಭಿಮಾನದ ಚಿಗುರು ಮೂಡಿಸಿದರು. ಈ ದಂಗೆಯನ್ನು ಬ್ರಿಟಿಷರು ತೀವ್ರವಾಗಿ ನಿಗ್ರಹಿಸಿದರೂ ಪರಿಣಾಮವಾಗಿ ಮುಂದೆ 1908ರ ಚೋಟಾನಾಗ್ಪುರ್ ಟೆನನ್ಸಿ ಆಕ್ಟ್ ಮೂಲಕ ಆದಿವಾಸಿಗಳ ಭೂಮಿ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳನ್ನು ತರಬೇಕಾಯಿತು.
ಬಿರ್ಸಾ ಮುಂಡಾ ಅವರನ್ನು 1900 ರಲ್ಲಿಯೇ ಬಂಧಿಸಿ ರಾಂಚಿ ಜೈಲಿನಲ್ಲಿರಿಸಲಾಯಿತು.ಬಿರ್ಸಾ ಬಂಧನಕ್ಕೊಳಗಾದಾಗ, ಬ್ರಿಟಿಷರು ಅವರನ್ನು “Most dangerous tribal leader” ಎಂದು ದಾಖಲಿಸಿದ್ದರು. 1900ರ ಜೂನ್ 9 ರಂದು ಜೈಲಿನಲ್ಲಿಯೇ ಅಕಾಲಿಕವಾಗಿ ಸಾವನ್ನಪ್ಪಿದರು. ಅಧಿಕೃತವಾಗಿ ಕಾಲರಾ ಎಂದು ಹೇಳಲಾದರೂ ಹಲವರು ಅವರನ್ನು ವಿಷಪ್ರಯೋಗದಿಂದ ಅಥವಾ ಹಿಂಸಿಸಿ ಕೊಂದರೆಂದು ನಂಬುತ್ತಾರೆ. ಅನೇಕರು ಇದು ಬ್ರಿಟಿಷರ ಸಂಚು ಎನ್ನುತ್ತಾರೆ.ಯಾವ ದಾಖಲೆಗಳೂ ಸ್ಪಷ್ಟವಾಗಿಲ್ಲ.ಆದ್ದರಿಂದ ಅವರ ಸಾವು—ಇಂದಿಗೂ ರಹಸ್ಯವೇ.ಆಗ ಅವರಿಗೆ ಕೇವಲ 25 ವರ್ಷ.

ಇಂದು ಅವರ ಹೆಸರಿನಲ್ಲಿ ಬಿರ್ಸಾ ಕೃಷಿ ವಿಶ್ವವಿದ್ಯಾಲಯ, ಬಿರ್ಸಾ ತಾಂತ್ರಿಕ ಸಂಸ್ಥೆ, ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣ, ಮೊದಲಾದ ಅನೇಕ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ. ಪ್ರತಿವರ್ಷ ನವೆಂಬರ್ 15 ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತದೆ. 2000ದ ನವೆಂಬರ್ 15 ಬಿರ್ಸಾ ಅವರ ಜನ್ಮದಿನದಂದು ಝಾರ್ಖಂಡ್ ರಾಜ್ಯವನ್ನು ಅಧಿಕೃತವಾಗಿ ರಚಿಸಲಾಯಿತು.

ಬಿರ್ಸಾ ಮುಂಡಾ ಅವರು ಕೇವಲ ಆದಿವಾಸಿ ನಾಯಕನಷ್ಟೇ ಅಲ್ಲ, ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಧಾರ್ಮಿಕ ಪುನರುಜ್ಜೀವನದ ಪ್ರತೀಕವಾಗಿದ್ದಾರೆ. ಅವರ ಜೀವನವು ತ್ಯಾಗ, ಧೈರ್ಯ ಮತ್ತು ನಂಬಿಕೆಯ ಸಂದೇಶವನ್ನು ನೀಡುತ್ತದೆ. ಅವರು ತೋರಿಸಿಕೊಟ್ಟ ದಾರಿಯು ನ್ಯಾಯ, ಏಕತೆ, ಸ್ವಾಭಿಮಾನದ ದಾರಿಯಾಗಿದೆ. ಕಾಡಿನಲ್ಲಿ ಅರಳಿ ಭಾರತಾಂಬೆಯ ಮುಡಿಗೇರಿ ಸಾರ್ಥಕತೆಯನ್ನು ಪಡೆದ ಕ್ರಾಂತಿಪುಷ್ಪದ 150ನೇ ಜನ್ಮದಿನವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
ಇಂದಿನ ಪೀಳಿಗೆಗೆ ಬಿರ್ಸಾ ಮುಂಡಾ ಜೀವನ ನೀಡುವ ಸಂದೇಶ
ಸ್ವಾಭಿಮಾನವೇ ಬದುಕಿನ ಆಧಾರ
ಬಿರ್ಸಾ ಹೇಳಿದ್ದು—
“ನಿಮ್ಮ ಹಕ್ಕುಗಳನ್ನು ಬಿಡಬೇಡಿ.ಯಾರೂ ದೊಡ್ಡವರು, ಸಣ್ಣವರು ಎನ್ನುವುದಿಲ್ಲ.ನಮ್ಮ ಭೂಮಿ,ನಮ್ಮ ಆತ್ಮ”
ಇಂದಿನ ಯುವಕರು ತಮ್ಮ ಹುಟ್ಟೂರಿನ ಬಗ್ಗೆ ಪ್ರೀತಿ,ಕಾಳಜಿ, ಪರಿಸರಪ್ರೇಮ, ಸ್ವ- ಗೌರವ ಇವುಗಳನ್ನು ಉಳಿಸಿಕೊಳ್ಳಬೇಕು.

“ಜ್ಞಾನ ಪಡೆದರೆ ಜಗತ್ತನ್ನೇ ಬದಲಿಸಬಹುದು.”
ಬಿರ್ಸಾ ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಂತರು,
ಸಮಾಜದ ದುರುಪಯೋಗದ ವಿರುದ್ಧ ನಿಂತರು.
ಬಿರ್ಸಾ ಮುಂಡಾರ ಕ್ರಾಂತಿ ಜ್ವಾಲೆ ಇಂದೂ ನಂದಿಲ್ಲ,
ನ್ಯಾಯಕ್ಕಾಗಿ ನಿಲ್ಲುವ ಪ್ರತಿಯೊಬ್ಬರ ಹೃದಯದಲ್ಲಿ ಅದು ಇನ್ನೂ ಉರಿಯುತ್ತಿದೆ.
ಬಿರ್ಸಾ ಮುಂಡಾರ ಹುಟ್ಟುಹಬ್ಬ ಇಂದು ನಮ್ಮೆಲ್ಲರ ಮನದಲ್ಲಿ ಹೊಸ ಜಾಗೃತಿಯನ್ನು ಬೆಳಗಲಿ.
ಅವರ ಸತ್ಯ, ಧೈರ್ಯ ಮತ್ತು ಸ್ವಾಭಿಮಾನ ನಮಗೆ ದಾರಿದೀಪವಾಗಲಿ.ಅವರ ಆದರ್ಶಗಳಿಗೆ ಕೋಟಿ ನಮನಗಳುಸ್ವರ್ಣ ಕುಂದಾಪುರ

 

Related Articles

error: Content is protected !!