ಶಿವಮೊಗ್ಗ: ಪ್ರತಿ ನಿತ್ಯವೂ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆಯಾದರೂ ರಕ್ತದಾನ ಮಾಡಲು ಜನರಲ್ಲಿ ನಿರಾಸಕ್ತಿ ಹೆಚ್ಚುತ್ತಿದೆ. ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆ ಮಾಡಲಾಗುತ್ತಿದೆ.
ರಕ್ತದಾನದ ಬಗ್ಗೆ ಅರಿವು ಮೂಡಿಸು ವುದು. ರಕ್ತ ನೀಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನ, ಒಂದು ಯೂನಿಟ್ ರಕ್ತದಿಂದ ಬೇರೆಯವರಿಗೆ ಯಾವೆಲ್ಲಾ ರೀತಿಯ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಿ ರಕ್ತದಾನಿಗಳ ಸಂಖ್ಯೆ ಹೆಚ್ಚಳ ಮಾಡುವುದು ಇದರ ಪ್ರಮುಖ ಉದ್ದೇಶವೂ ಆಗಿದೆ.
ಪ್ರಸ್ತುತ ರಕ್ತದಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬೇಡಿಕೆಗೆ ತಕ್ಕಷ್ಟು ರಕ್ತವನ್ನು ಪೂರೈಕೆ ಮಾಡುವಷ್ಟು ದಾನಿಗಳು ಮುಂದೆ ಬರುತ್ತಿಲ್ಲ. ಸರ್ಕಾರ ಹಾಗೂ ಖಾಸಗಿ ರಕ್ತನಿಧಿಗಳು ಪ್ರತಿ ದಿನ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದರೂ ಕೂಡ ಕೊರತೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಹೋಲ್ ಬ್ಲಡ್ ಲಭ್ಯವಾಗುತ್ತದೆಯಾದರೂ ವಿಂಗಡಣೆ ಮಾಡುವ ಪ್ಲೇಟ್‌ಲೆಟ್, ಪ್ಲಾಸ್ಮಾ ಅಷ್ಟಾಗಿ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ.
ರಕ್ತಕ್ಕೆ ಪರ್ಯಾಯ ಬಳಕೆ ಇಲ್ಲದೆ ಇರುವುದರಿಂದ ಜನರೇ ಸ್ವಯಂ ಪ್ರೇರಣೆಯಿಂದ ರಕ್ತ ನೀಡಲು ಮುಂದೆ ಬರಬೇಕಿದೆ. ಇದನ್ನು ಮನಗಂಡು ನಗರದಲ್ಲಿ ರಕ್ತದಾನಿಗಳ ಸಂಘಗಳನ್ನು ಹುಟ್ಟು ಹಾಕಲಾಗಿದೆ. ಆ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತ ನೀಡಲಾಗುತ್ತಿದೆ. ಇದಲ್ಲದೆ ಜನ್ಮ ದಿನದಂದು ಅಥವಾ ವಿಶೇಷ ಸಂದರ್ಭಗಳಲ್ಲಿ ನೀಡುವ ಸ್ವಯಂಪ್ರೇರಿತ ರಕ್ತದಾನಿಗಳಿದ್ದಾರಾದರೂ ಕೊರತೆ ನೀಗಿಸುವಷ್ಟು ದಾನಿಗಳಿಲ್ಲ ಎಂಬುದು ಅಸಮಾಧಾನದ ಸಂಗತಿ. ಯುವ ಸಮುದಾಯ ರಕ್ತದಾನ ಮಾಡಲು ಇನ್ನಾದರೂ ಮನಸ್ಸು ಮಾಡಬೇಕು
ಸತ್ಯನಾರಾಯಣ ತುಂಬಳ್ಳಿ,ಶಿವಮೊಗ್ಗ