Home » ಅಜ್ಞಾನದಿಂದ ಜ್ಞಾನಕ್ಕೆ – ಸಾಕ್ಷರತೆಯ ಹಾದಿ
 

ಅಜ್ಞಾನದಿಂದ ಜ್ಞಾನಕ್ಕೆ – ಸಾಕ್ಷರತೆಯ ಹಾದಿ

by Kundapur Xpress
Spread the love

ಪ್ರತಿ ವರ್ಷದ ಸೆಪ್ಟೆಂಬರ್ 8ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. 1966ರಲ್ಲಿ ವಿಶ್ವಸಂಸ್ಥೆ ಅಂಗಸಂಸ್ಥೆಯಾದ ಯುನೆಸ್ಕೋ (UNESCO) ಈ ದಿನವನ್ನು ಘೋಷಿಸಿತು. ಮಾನವನ ಮೂಲ ಹಕ್ಕುಗಳಲ್ಲಿ ಪ್ರಮುಖವಾದದ್ದು ಸಾಕ್ಷರತೆ – ಅಕ್ಷರ ಓದಲು, ಬರೆಯಲು ಮತ್ತು ಅರಿತು ಬದುಕಲು ಕಲಿಯುವ ಸಾಮರ್ಥ್ಯ.
ಸಾಕ್ಷರತೆ ಎಂದರೆ ಕೇವಲ ಅಕ್ಷರಗಳನ್ನು ಓದುವುದು ಅಥವಾ ಬರೆಯುವುದಲ್ಲ. ಅದು ಜೀವನವನ್ನು ಅರ್ಥಮಾಡಿಕೊಳ್ಳುವ, ಸಮಾಜದಲ್ಲಿ ಸಮಾನವಾಗಿ ಬದುಕುವ, ಹಕ್ಕು–ಕರ್ತವ್ಯಗಳನ್ನು ಅರಿತು ನಡೆಯುವ ಶಕ್ತಿ. ಸಾಕ್ಷರತೆ ಇಲ್ಲದೆ ವ್ಯಕ್ತಿ ಕತ್ತಲೆಯಲ್ಲಿ ಬದುಕುವಂತಾಗುತ್ತದೆ.
ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ‘ನಹಿ ಜ್ಞಾನೇನ ಸದೃಶಂ’. ನಾವು ಜ್ಞಾನವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳಬಹುದು. ಆದರೆ ಶಿಕ್ಷಣ ಅಥವಾ ಅಕ್ಷರ ಜ್ಞಾನದ ತಿಳಿವಳಿಕೆ ಇಲ್ಲದ ಅರಿವು ಅಪೂರ್ಣವೇ ಸರಿ. ‘ವಿದ್ಯಾ ಸರ್ವಸ್ಯ ಭೂಷಣಂ’ ಎಂಬ ಮಾತು ಎಲ್ಲರಿಗೂ ತಿಳಿದಿದೆ. ಅಂದರೆ ವಿದ್ಯೆ ಮಾನವನಿಗೆ ಹೆಚ್ಚು ಶೋಭಿಸುವಂತದು ಮತ್ತು ಅತ್ಯಂತ ಅವಶ್ಯಕ. ಇದನ್ನು ಮನಗಂಡು ಯುನೆಸ್ಕೋ ಯಾವುದೇ ದೇಶದ ಅಭಿವೃದ್ಧಿಗೆ ಅಕ್ಷರ ಜ್ಞಾನ ಅತಿ ಮುಖ್ಯವೆಂದೂ ಪ್ರತಿಯೊಂದು ದೇಶವು ಅನಕ್ಷರತೆಯನ್ನು ತೊಡೆದು ಹಾಕಬೇಕೆಂದು ನಿರ್ಣಯಿಸಿತು. ಹೀಗೆ ಸಾಕ್ಷರತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೆಪ್ಟೆಂಬರ್ 8 ನ್ನು ‘ವಿಶ್ವ ಸಾಕ್ಷರತಾ ದಿನ’ವೆಂದು ಘೋಷಿಸಿತು.
ಆರಂಭದಲ್ಲಿ ಸಾಕ್ಷರತೆ ಅಂದರೆ ಓದುವ ಮತ್ತು ಬರೆಯುವ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಈಗ ಅದರ ವ್ಯಾಪ್ತಿ ವಿಶಾಲವಾಗಿದೆ. ಈಗ ಸಾಕ್ಷರತೆ ಎನ್ನುವುದು ಕೇವಲ ಓದುವ ಬರೆಯುವ ಚಟುವಟಿಕೆಯಲ್ಲ. ಅದಕ್ಕಿಂತಲೂ ಮಿಗಿಲಾಗಿ, ತಾವು ಓದಿರುವುದನ್ನು, ಬರೆದಿರುವುದನ್ನು ಗ್ರಹಿಸಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವೇ ಸಾಕ್ಷರತೆ. ನಮ್ಮ ಶೈಕ್ಷಣಿಕ ಅಧ್ಯಯನಗಳಿಗೆ ಸಾಕ್ಷರತೆ ಅತಿ ಅಗತ್ಯ. ಶಿಕ್ಷಣವು ಸಾಕ್ಷರತೆಯನ್ನು ಆಧರಿಸಿದೆ. ಶಿಕ್ಷಣವು– ‘ಅಜ್ಞಾನ
ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ’ ಅಂದರೆ ಅಜ್ಞಾನ ಎಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಸಾಧನ. ಕತ್ತಲೆ ಇದ್ದಾಗ ನಾವು ಯಾವುದೇ ವಸ್ತುವನ್ನು ಕಾಣಲು ಸಾಧ್ಯವಿಲ್ಲ. ಬೆಳಕಿದ್ದಾಗ ಮಾತ್ರ ನಾವು ವಸ್ತುಗಳನ್ನು ಕಾಣಬಹುದು. ಹಾಗೆ ಅಕ್ಷರ ಜ್ಞಾನವಿದ್ದರೆ ಮಾತ್ರ ಜಗತ್ತಿನ ಆಳ- ಅಗಲಗಳನ್ನು ತಿಳಿಯಲು ಸಾಧ್ಯ. ಪ್ರಪಂಚದ ಅನೇಕ ಸಮಸ್ಯೆಗಳಿಗೆ ಅನಕ್ಷರತೆಯೇ ಕಾರಣ ಎಂದರಿತ ವಿಶ್ವಸಂಸ್ಥೆಯು ಎಲ್ಲಾ ದೃಷ್ಟಿಕೋನಗಳಲ್ಲಿ ಚಿಂತನೆ ನಡೆಸಿ, ವ್ಯಕ್ತಿಯ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಅರಿವನ್ನು ಮೂಡಿಸುವ ಉದ್ದೇಶದಿಂದ ‘ವಿಶ್ವ ಸಾಕ್ಷರತಾ ದಿನ’ಕ್ಕೆ ಒತ್ತು ನೀಡಿದೆ.
ಮನುಷ್ಯನಲ್ಲಿ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೆಚ್ಚಿಸಲು ಸಾಕ್ಷರತೆ ಒಂದು ಸಾಧನವಾಗಿದೆ. ಇದು ಶಿಕ್ಷಣದ ಒಂದು ಭಾಗವೂ ಆಗಿದೆ. ದೇಶದ ಜನರು ಸಾಕ್ಷರರಾಗಿದ್ದರೆ ಮಾತ್ರ ಆ ದೇಶ ಹೆಚ್ಚು ಪ್ರಗತಿ ಹೊಂದಲು ಸಾಧ್ಯ. ಇದು ಆ ದೇಶದ ಶ್ರೀಮಂತಿಕೆಯನ್ನು ತೋರಿಸುತ್ತದೆ. “ಶಿಕ್ಷಣವು ಜಗತ್ತನ್ನು ಬದಲಾಯಿಸಬಹುದಾದಂತಹ ಪ್ರಮುಖ ಅಸ್ತ್ರವಾಗಿದೆ” ಎಂದಿದ್ದಾರೆ ನೆಲ್ಸನ್ ಮಂಡೇಲಾ ಅವರು. ಹಾಗೆಯೇ ಸ್ವಾಮಿ ವಿವೇಕಾನಂದರು “ಶಿಕ್ಷಣವು ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ” ಎಂದಿದ್ದಾರೆ. ಸಾಕ್ಷರತೆಯು ದೇಶದ ಆರ್ಥಿಕ ಪ್ರಗತಿ,ಸಾಮಾಜಿಕ ಪ್ರಗತಿ, ಬಡತನ ನಿರ್ಮೂಲನ, ಕೃಷಿ ಕ್ಷೇತ್ರದಲ್ಲಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ವಿಧಾನಗಳ ಆವಿಷ್ಕಾರ, ನಿರುದ್ಯೋಗ ಸಮಸ್ಯೆ ನಿವಾರಣೆ, ಜನರಲ್ಲಿರುವ ಮೂಢನಂಬಿಕೆಗಳ ನಿರ್ಮೂಲನೆ, ಜನರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸಲು, ಜನರು ಸ್ವಾವಲಂಬಿಯಾಗಿ ಬದುಕಲು, ಸಕಾರಾತ್ಮಕ ಚಿಂತನೆ ನಡೆಸಲು ಹೀಗೆ ಹತ್ತು ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ. ಇದು ಒಟ್ಟಿನಲ್ಲಿ ನಮ್ಮ ವ್ಯಕ್ತಿತ್ವ ರೂಪಿಸುವುದರಲ್ಲಿ ಬಹಳ ಮುಖ್ಯ. ಇದು ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯಗಳನ್ನು ಹೊಂದಿರುವುದು. ಸಾಕ್ಷರತೆ ಮತ್ತು ಆರೋಗ್ಯ, ಸಾಕ್ಷರತೆ ಮತ್ತು ಸಬಲೀಕರಣ, ಸಾಕ್ಷರತೆ ಮತ್ತು ಶಾಂತಿ, ಸುಸ್ಥಿರ ಮತ್ತು ಶಾಂತಿಯುತ ಸಮಾಜ ಇವು ಕೆಲವು ಧ್ಯೇಯವಾಕ್ಯಗಳು. ಇವು ಒಂದು ದಿನಕ್ಕೆ ಸೀಮಿತವಲ್ಲ. ವರ್ಷಪೂರ್ತಿ ಕೆಲಸ ಮಾಡಬೇಕಾಗುತ್ತದೆ.
ಭಾರತವು ‘ಸರ್ವ ಶಿಕ್ಷಣ ಅಭಿಯಾನ’, ರಾಷ್ಟ್ರೀಯ ಸಾಕ್ಷರತಾ ಮಿಷನ್,ಹಾಗೂ ನಿರಕ್ಷರತಾ ನಿರ್ಮೂಲನಾ ಯೋಜನೆಗಳ ಮೂಲಕ ಸಾಕ್ಷರತೆಯ ದೆಸೆಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ‘ಬೇಟೀ ಬಚಾವೋ- ಬೇಟೀ ಪಢಾವೋ’ ಎಂಬ ಅಭಿಯಾನದ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡುತ್ತಿದೆ. ‘ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ’ ಎಂಬ ಮಾತಿದೆ. ಮೊದಲು 13 % ರಷ್ಟಿದ್ದ ಸಾಕ್ಷರತೆಯ ಪ್ರಮಾಣ ಈಗ 77%ಕ್ಕೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತಿದೆ.
ಹಿಂದೆ ಎಲ್ಲ ಗ್ರಾಮಗಳಲ್ಲಿ ಶಾಲೆಗಳಿರಲಿಲ್ಲ. ಆಗ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿತ್ತು. ಈಗ ಪ್ರತಿ ಗ್ರಾಮ ಮತ್ತು ನಗರಗಳಲ್ಲಿ ವಿದ್ಯಾ ಸಂಸ್ಥೆಗಳಿವೆ. ಅಲ್ಲದೆ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೂ ಬಡತನ, ಮಾಹಿತಿ ಕೊರತೆ, ಸಮಾನತೆ,ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದು ಇತ್ಯಾದಿ ಕಾರಣಗಳಿಂದ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮತ್ತು ಅನಕ್ಷರಸ್ಥರಾಗಿ ಉಳಿಯುತ್ತಿದ್ದಾರೆ.

ಸಾಕ್ಷರತೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಬಿಹಾರ ಕೊನೆ ಸ್ಥಾನದಲ್ಲಿದೆ. ಕೇರಳದ ಎರ್ನಾಕುಲಂ ಜಿಲ್ಲೆಯು ನಮ್ಮ ದೇಶದ ಪ್ರಥಮ ‘ಸಾಕ್ಷರತಾ ಜಿಲ್ಲೆ’ ಎಂಬ ಹೆಸರಿಗೆ ಪಾತ್ರವಾಗಿದೆ. ಸಮುದಾಯ ಗ್ರಂಥಾಲಯಗಳನ್ನು ನಿರ್ಮಿಸುವುದು, ವಯಸ್ಕರ ಮತ್ತು ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು, ಸಾಕ್ಷರತೆಯ ಬಗ್ಗೆ ಕಾರ್ಯಗಾರ ಏರ್ಪಡಿಸುವುದು, ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು ಇವೆಲ್ಲದರ ಮೂಲಕ ಜನರಿಗೆ ಸಾಕ್ಷರತೆಯ ಮಹತ್ತ್ವವನ್ನು ತಿಳಿಸಬಹುದು.

ಈಗ ನಮ್ಮ ದೇಶದ ಮುಖ್ಯ ಗುರಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವುದಾಗಿದೆ. ಅದಕ್ಕಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಅದು ಜಾರಿಗೆ ತಂದಿದೆ. ಕೇವಲ ಸಾಕ್ಷರತೆ ಮತ್ತು ವಿದ್ಯೆ ಕಲಿತರೆ ಮಾತ್ರ ಸಾಲದು. ಅದರ ಜೊತೆಗೆ ಒಳ್ಳೆಯ ಸಂಸ್ಕಾರಯುತ ಶಿಕ್ಷಣ ಕೊಡುವುದು ನಮ್ಮ ಗುರಿಯಾಗಬೇಕು. ಅಂತಹ ಸಂಸ್ಕಾರವಂತ ನಾಗರಿಕರು ದೇಶದ ಅಭಿವೃದ್ಧಿಗೆ ಪೂರಕರು. ಆದರೆ ಇಂದು ಕೆಲವರು ಉತ್ತಮ ಶಿಕ್ಷಣ ಪಡೆದು ಸಾಕ್ಷರರಾದರೂ ರಾಕ್ಷಸರಾಗಿರುವುದು ಕಂಡುಬರುತ್ತಿದೆ. ಇದು ತೀರಾ ಅಪಾಯಕಾರಿ ಬೆಳವಣಿಗೆ. ನಮ್ಮ ಸಮಾಜದ ಮತ್ತು ದೇಶದ ಪ್ರಗತಿಗಾಗಿ ನಮ್ಮ ಗುರಿ ಸಾಕ್ಷರ ಭಾರತ ಮಾತ್ರವಲ್ಲ. ನಮ್ಮ ಗುರಿ ಸುಸಂಸ್ಕೃತ ಭಾರತ, ಸುಶಿಕ್ಷಿತ ಭಾರತ, ಸುವ್ಯವಸ್ಥಿತ ಭಾರತ. ಸಮಾಜದ ಮತ್ತು ದೇಶದ ಸುಸ್ಥಿರತೆ ಮತ್ತು ಶಾಂತಿಯನ್ನು ಕಾಪಾಡಲು ಎಲ್ಲರೂ ಸುಶಿಕ್ಷಿತ ಸಾಕ್ಷರರಾಗಬೇಕು. ಅದಕ್ಕಾಗಿ ದೇಶದ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ.

ವಿಶ್ವ ಸಾಕ್ಷರತಾ ದಿನದ ಸಂದೇಶ

ಈ ದಿನ ನಮ್ಮೆಲ್ಲರಿಗೂ ಒಂದು ಸ್ಮರಣೆ – “ಸಾಕ್ಷರತೆ ಬೆಳಕಿಗೆ ಕೊಂಡಿ, ಅಜ್ಞಾನಕ್ಕೆ ಅಂತ್ಯ.”
ಪ್ರತಿ ಮಗುವಿಗೂ, ಪ್ರತಿ ಮಹಿಳೆಗೆ, ಪ್ರತಿ ವ್ಯಕ್ತಿಗೂ ಕಲಿಯುವ ಹಕ್ಕು ಇದೆ. ಸಾಕ್ಷರತೆ ಎಂದರೆ ಕೇವಲ ವೈಯಕ್ತಿಕ ಲಾಭವಲ್ಲ, ಅದು ಮಾನವಕುಲದ ಪ್ರಗತಿಯ ಬಾಗಿಲು.ಒಬ್ಬ ವ್ಯಕ್ತಿ ಸಾಕ್ಷರನಾದರೆ, ಒಂದು ಕುಟುಂಬ ಬದಲಾಗುತ್ತದೆ; ಒಂದು ಕುಟುಂಬ ಸಾಕ್ಷರವಾದರೆ, ಒಂದು ಸಮಾಜ ಬದಲಾಗುತ್ತದೆ; ಸಮಾಜ ಬದಲಾಗಿದರೆ, ಒಂದು ರಾಷ್ಟ್ರ ಪ್ರಗತಿಪಥದಲ್ಲಿ ಸಾಗುತ್ತದೆ.”

ಸಾಕ್ಷರತೆಯ ಬೆಳಕನ್ನು ಎಲ್ಲೆಡೆ ಹಂಚೋಣ.

ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

 

Related Articles

error: Content is protected !!