Home » ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ
 

ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ

ಶಿವರಾತ್ರಿ ಹಬ್ಬದ ಆಶಯ

by Kundapur Xpress
Spread the love

ಪಾರ್ವತೀ – ಪರಮೇಶ್ವರರು ಲೋಕದ ತಾಯಿತಂದೆಯರು. ಕೈಲಾಸವೆಂಬ ಸುಂದರ ತಾಣದಲ್ಲಿ ಆದರ್ಶವಾದ ಸಂಸಾರವನ್ನು ಕಟ್ಟಿಕೊಂಡು ಮನೆಯೊಡತಿ ಪಾರ್ವತಿಗೆ ತನ್ನ ಅರ್ಧ ಶರೀರವನ್ನೇ ಕೊಟ್ಟಂತಹ ಅರ್ಧನಾರೀಶ್ವರ. ಇದು ಪುರುಷತ್ವದ ಸಂಕೇತವೂ ಮಾತ್ರವಲ್ಲದೆ ಲೋಕದಲ್ಲಿ ಷುರುಷ ಮತ್ತು ಮಹಿಳೆ ಹೇಗೆ ಹೊಂದಿಕೊಂಡು ಬದುಕಬೇಕೆಂಬ ಆದರ್ಶವೂ ಹೌದು. ಕೈಲಾಸದಲ್ಲಿ ಶಿವನು ಒಡ್ಡೋಲಗವನ್ನು ಕೊಟ್ಟನೆಂದರೆ ಅವನ ಮಂಗಳ ಸಂಸಾರವಿಡೀ ಅಲ್ಲಿರುತ್ತದೆ. ಅವನ ಮಕ್ಕಳಾದ ಗುಹ- ಗಣಪರು, ವೀರಭದ್ರ ಇವರ ಜೊತೆಗೆ, ಅವನ ವಾಹನವಾದ ನಂದಿ, ಭೃಂಗಿ, ಭೃಕುಟಿಯೇ ಮೊದಲಾದ ಅಸಂಖ್ಯ ಗಣ ಅಲ್ಲಿರುತ್ತದೆ. ಅವರೆಲ್ಲಾ ಶಿವನ ಸಂಸಾರವೇ. ಅವರ ಜೊತೆಗೆ ಸಂಭಾಷಿಸುವುದೆಂದರೆ ಶಿವನಿಗೆ ಆಪ್ಯಾಯಮಾನ.

 

ಇಷ್ಟಕ್ಕೆ ಶಿವನ ಸಂಸಾರ ಮುಗಿಯಿತೆನ್ನುವಂತಿಲ್ಲ. ಅವನ ತಲೆಯ ಮೇಲೆ ಗಂಗೆ ಇದ್ದಾಳೆ. ಶಿಖೆಯಲ್ಲಿ ಚಂದ್ರ, ಮೈಮೇಲೆಲ್ಲಾ ಹರಿದಾಡುವ ಸರ್ಪ, ಇವುಗಳಲ್ಲೆಲ್ಲ ಪರಶಿವನ ಸ್ವರೂಪವನ್ನೂ ವೃತ್ತಿಯನ್ನೂ ಸೂಚಿಸುತ್ತದೆ. ಶಿವನ ಮಂಗಳ ಸಂಸಾರದಲ್ಲಿ ನವಿಲು, ಇಲಿ, ಸರ್ಪ, ಸಿಂಹಗಳಂತಹ ವಿಭಿನ್ನ ಮನಸ್ಸುಗಳು, ವಿಭಿನ್ನ ಆಲೋಚನೆಗಳು, ವಿಭಿನ್ನ ಗುಣಗಳುಳ್ಳವರೆಲ್ಲರೂ ಋಷ್ಯಾಶ್ರಮದಂತೆ ಯಾವುದೇ ಹಸ್ತಕ್ಷೇಪವಿಲ್ಲದೆ, ಸಹಬಾಳ್ವೆ ನಡೆಸುವುದನ್ನು ಕಾಣುತ್ತೇವೆ. ಈ ರೀತಿ ಶಾಂತಿ, ಸಂತೋಷ, ಸಮೃದ್ಧಿಯಲ್ಲಿ ಸಮರಸದಿಂದ ಬದುಕುವ ರೀತಿಯನ್ನು ಜಗತ್ತಿಗೆ ಕೊಟ್ಟವನು ಶಿವ. ಸಮುದ್ರ ಮಂಥನದಲ್ಲಿ ವಿಷ ಬಂದಾಗ ಅದನ್ನು ಶಿವ ತಾನು ಕುಡಿದು, ಅಮೃತವನ್ನು ಲೋಕಕ್ಕೆ ಕೊಟ್ಟ. ಲೋಕದ ಜನರ ಕಷ್ಟಗಳನ್ನು ತಾನು ಸ್ವೀಕರಿಸಿ ಅವರಿಗೆ ಸುಖವನ್ನು ಆನಂದವನ್ನು ಕೊಡುವುದು ಶಿವನ ಸ್ವಭಾವ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಅವನು, ಲೋಕ ಮಂಗಳಕಾರಿ, ಆದ್ದರಿಂದಲೇ ಅವನು ಶಿವ. ಅವನ ಕೈಯಲ್ಲಿರುವ ‘ತ್ರಿಶೂಲ’ ಸೃಷ್ಟಿ- ಸ್ಥಿತಿ- ಲಯಗಳೆಂಬ ಮೂರು ಗುಣಗಳನ್ನು ಪ್ರತಿನಿಧಿಸುತ್ತಿದ್ದು, ಅವನೇರುವ ‘ವೃಷಭ ‘ ಧರ್ಮದ ಸಂಕೇತ. ಅವನ ತಾಂಡವ ನೃತ್ಯಕ್ಕೆ ಜಗತ್ತೇ ಬೆರಗಾದರೆ, ಕೈಯಲ್ಲಿರುವ ‘ಡಮರು’ ಸೃಷ್ಟಿಯ ನಾದದ ಓಂಕಾರದ ಮೂಲ

ಶಿವನ ಅರೆನಿಮೀಲಿತ ಎರಡು ಕಣ್ಣುಗಳು ಸದಾ ಧ್ಯಾನದಿಂದ ಇದ್ದು, ಜಗತ್ ಕಲ್ಯಾಣಕ್ಕಾಗಿ ತರಂಗಗಳು ಉಂಟಾಗಿ, ನಮ್ಮನ್ನು ನಾವು ಅರಿತುಕೊಂಡು ಆಧ್ಯಾತ್ಮಿಕದ ಕಡೆಗೆ ಹೋಗುವ ಸಂದೇಶ ಮಾತ್ರವಲ್ಲದೆ ಜಗತ್ತು ಪ್ರೇಮಮಯವಾಗಬೇಕು ಎಂಬ ಆಶಯ. ಶಿವನ ‘ಮೂರನೇ ಕಣ್ಣು’ ಜ್ಞಾನದ ಸಂಕೇತದ ಜೊತೆಗೆ ನಾಶದ ಪ್ರತೀಕ ಕೂಡ. ಜಗತ್ತಿಗೆ ಪಿತನಾದ ಶಿವನಿಂದ ಪ್ರತಿ ಮನೆಯ ಯಜಮಾನನು ಈ ಆಧ್ಯಾತ್ಮಿಕ ತತ್ತ್ವವನ್ನು ತಿಳಿದು ಬಾಳಬೇಕು. ಶಿವನುಡುವ ‘ಗಜಚರ್ಮ’ ಹಾಗೂ ‘ವ್ಯಾಘ್ರಚರ್ಮ’ ಜಡತೆ ಹಾಗೂ ಅಹಂಕಾರದ ಪ್ರತೀಕಗಳು. ಮೈಮೇಲಿರುವ ‘ಸರ್ಪಗಳು’ ವಿಧವಿಧವಾದ ಬಯಕೆಗಳು, ಷಡ್ ವೈರಿಗಳು. ಇವುಗಳನ್ನೆಲ್ಲ ನಿಯಂತ್ರಿಸುವವನು ಶಿವ. ಮೈಯಲ್ಲೆಲ್ಲ ಚಿತಾಭಸ್ಮ. ಅಂದರೆ ಜಗತ್ತಿನಲ್ಲಿ ಲಯವಾದ ವಸ್ತುಗಳೆಲ್ಲವೂ ಶಿವನಲ್ಲಿ ಸೇರಿಕೊಳ್ಳುತ್ತವೆ ಎನ್ನುವುದರ ಸೂಚಕವದು. ಕಪಾಲಗಳ ಮಾಲೆಯನ್ನು ಧರಿಸಿರುವ ಆತನಿಗೆ ಯಾವುದೂ ವರ್ಜ್ಯವಲ್ಲ. ಇಷ್ಟೆಲ್ಲ ಇದ್ದರೂ ಅವನು ನಿರಾಸಕ್ತ. ಅವನು ಭೋಗಿಯಲ್ಲ ಯೋಗಿ. ಹೀಗೆ ತನ್ನ ವಿಚಿತ್ರ ಸ್ವರೂಪದಿಂದ, ವೃತ್ತಿಯಿಂದ ಲೋಕವನ್ನೆಲ್ಲಾ ಅನುಗ್ರಹಿಸುವ ಮಹಾದೇವ ಶಿವ. ಆದಿಕಿರಾತನಾಗಿ ಅವನನ್ನು ಗುರುತಿಸಿದರೂ ಅವನ ಹೃದಯ ಸುಂದರ. ಮನಸ್ಸು ಮೃದು. ಭಾಷೆ ಲಲಿತ. ಆದ್ದರಿಂದಲೇ ಅವನು ಸತ್ಯಂ- ಶಿವಂ- ಸುಂದರಂ

ವ್ಯೋಮದಲ್ಲೆಲ್ಲ ಹರಡಿದ ಅವನ ಕೇಶಸಂಕುಲ, ಗಂಗೆಯ ಧಾರೆಯಿಂದ ಲೋಕವನ್ನು ರಕ್ಷಿಸುವುದಕ್ಕೋಸ್ಕರವೇ ಜಟಾಮಂಡಲದಲ್ಲಿ ಗಂಗೆಯನ್ನು ತುಂಬಿಕೊಂಡು ಗಂಗಾಧರನಾದ. ತನಗಾಗಿ ಏನನ್ನು ಬಯಸದ ಬಯಲಬೈರಾಗಿ. ಆದರೆ ತನ್ನನ್ನು ನಂಬಿದ ಮಂದಿಗೆ ಎಲ್ಲ ಭೋಗಗಳನ್ನು ಅನುಗ್ರಹಿಸುವ ಮಹಾದೇವ. ಇನ್ನವನ ಮಡದಿ ಪಾರ್ವತಿ ಅವಳು ಅನ್ನಪೂರ್ಣೇ ಸದಾಪೂರ್ಣೆ
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ
ಭಿಕ್ಷಾಂ ದೇಹಿ ಚ ಪಾರ್ವತಿ
ಜ್ಞಾನ ವೈರಾಗ್ಯಗಳನ್ನು ಕೊಡುವವನು ಶಿವ. ಜಗದಂಬೆ ಪಾರ್ವತಿ ನಮ್ಮ ಪೋಷಣೆಯನ್ನು ಮಾಡುವ ಕರುಣಾಮಯಿ. ಅವಳ ಕರುಣೆಯೇ ಕಾರಣವಾಗಿ ರಾಕ್ಷಸ ಶಿಶುಗಳು ಬೆಳೆದು ನಿಲ್ಲುವ ಹಾಗಾಯಿತು. ಹಾಗಾಗಿ ಶಿವನರಸಿ ಶಿವೇ ನಿಜಾರ್ಥದಲ್ಲಿ ಲೋಕಕ್ಕೆ ತಾಯಿ. ಮಕ್ಕಳು ಗುಹ-ಗಣಪರು. ಗುಹನು ಗುಹ್ಯನೂ ಹೌದು. ಅವನ ಹುಟ್ಟಿನ ಕಥೆಯು ಅದೇ ರೀತಿಯಾದದ್ದು. ಹಲವು ತಾಯಂದಿರನ್ನು ಹೊಂದಿದವನಾತ. ಹಲವು ಹೆಸರುಗಳನ್ನು ಹೊಂದಿದ. ದೇವಸೇನಾನಿಯಾಗಿ ದೇವತೆಗಳಿಗೆ ರಕ್ಷಕನಾದ. ಕುಮಾರಸುಬ್ರಹ್ಮಣ್ಯನಾಗಿ, ಕಾರ್ತಿಕೇಯನಾಗಿ ಲೋಕಾನುಸಂಗ್ರಹವನ್ನು ಮಾಡುತ್ತಾ ಹರನಂತೆಯೇ ಮಂಗಳಕರನು. ಗಣಪತಿಯಾದರೂ ವಿಶೇಷ ಸಂದರ್ಭದಲ್ಲಿ ಜನಿಸಿದ. ಮಣ್ಣಿನ ಮಗನೇ ಆದ. ಶಿವ – ಪಾರ್ವತಿಯರ ಮಗನಾದರೂ ಮಣ್ಣಿನ ಲೋಕದೊಡನೆ ವಿಶೇಷ ಪ್ರೀತಿ. ಕಲಿಯುಗದಲ್ಲಿ ಸುಲಭ ಪೂಜ್ಯನಾದವನು. ವಿಘ್ನನಿವಾರಕ ಗಣಪ, ಮಂಗಲಮೂರ್ತಿ, ಸದಾ ಅಭಯಹಸ್ತ, ಶಿವನಿಗೆ ಯೋಗ್ಯ ಕುಮಾರನೇ. ಮೊದಲ ಪೂಜೆ ಅವನಿಗೆ. ವೀರಭದ್ರ, ಶಿವನ ಕೋಪದಿಂದ ಜನಿಸಿದವನು. ಸತೀದೇವಿಯ ಗೌರವವನ್ನು ಕಾಯುವುದಕ್ಕೆ ದಕ್ಷನ ವಧೆಗಾಗಿ ನಿಯೋಜನೆಗೊಂಡವನು. ಆದರೆ ಭಕ್ತಿಯಿಂದ ಪೂಜಿಸಿದರೆ ಅವನೂ ಮಂಗಳಕಾರನೆ.

ಇವರಷ್ಟೇ ಶಿವನ ಸಂಸಾರವಲ್ಲ. ಅವನ ಪಾರ್ಶ್ವದ ನಂದೀಶ್ವರ, ಭೃಂಗಿ, ಭೃಕುಟಿಯೇ ಮೊದಲಾದ ಪ್ರಮಥಗಣಗಳಾಗಲೀ ಎಲ್ಲರೂ ಶಿವನ ಸಂಸಾರಕ್ಕೆ ಸೇರಿದವರೇ. ಎಲ್ಲರೂ ಮಂಗಳಕಾರರೇ. ಶಿವನ ಮಂಗಳಮಯ ಸಂಸಾರದಲ್ಲಿ ಸೃಷ್ಟಿಯ ಮೂಲತತ್ತ್ವವನ್ನು ಕಾಣುತ್ತೇವೆ. ಎಲ್ಲದರಲ್ಲೂ ಪರಮಾತ್ಮನನ್ನು ಕಾಣುವುದು ಸನಾತನ ಧರ್ಮದ ಮೂಲ ಸೂತ್ರ. ಎಲ್ಲಿ ಧ್ಯಾನ ಇದೆಯೋ ಎಲ್ಲಿ ಆಧ್ಯಾತ್ಮಿಕತೆ ಇದೆಯೋ ಅಲ್ಲಿ ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಪಡೆಯಬಹುದೆಂದು ಶಿವನ ಮಂಗಳ ಸಂಸಾರದಿಂದ ನಾವು ಕಲಿಯಬೇಕು. ಪ್ರತಿಯೊಂದು ಕುಟುಂಬವು ಮಂಗಳ ಸಂಸಾರವಾದರೆ ಆಹಾ ಪ್ರಪಂಚ ಎಷ್ಟು ಸುಂದರ!. ಹಾಗಾಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.
ಶಿವರಾತ್ರಿ ಹಬ್ಬದ ಶುಭಾಶಯಗಳು

ಸ್ವರ್ಣಾ ಕುಂದಾಪುರ

 

Related Articles

error: Content is protected !!