Home » ಹಾಲಾಡಿಯವರು ಮಾಡಿದ ‘Solo ಟ್ರಿಪ್’  ಕಥನ
 

ಹಾಲಾಡಿಯವರು ಮಾಡಿದ ‘Solo ಟ್ರಿಪ್’  ಕಥನ

by Kundapur Xpress
Spread the love

ಕೃತಿಯ ಹೆಸರು : ‘ನನ್ನ Solo ಟ್ರಿಪ್ ‘
ಲೇ : ಶಶಿಧರ ಹಾಲಾಡಿ
ಪ್ರ : ಸ್ವಪ್ನ ಬುಕ್ಸ್, ಬೆಂಗಳೂರು

ಪಾರ್ಟಿ-ಕಂಪೆನಿಗಳೆಂದು ಸದಾ ಸ್ನೇಹಿತರೊಂದಿಗೆ ಬಿಡುವಿನ ಸಮಯವನ್ನು ಕಳೆಯುವ ಇಂದಿನ ಯುವಜನತೆ ಕೆಲವೊಮ್ಮೆ ‘ಸೋಲೋಟ್ರಿಪ್’ ಎಂದು ದೂರ ಪ್ರವಾಸ ಹೋಗುವುದೂ ಇದೆ.  ಇವತ್ತಿನ ಕಾಲದಲ್ಲಿ ಸೋಲೋಟ್ರಿಪ್ ಅಂದರೆ ಸ್ನೇಹಿತರನ್ನು ಬಿಟ್ಟು ಒಬ್ಬರೇ ವಿಮಾನ-ರೈಲು-ಬಸ್ಸು-ಕಾರುಗಳಲ್ಲಿ ತಿಂಗಳಿಗೆ ಮೊದಲೇ ಬುಕ್ ಮಾಡಿ ಇಳಿದುಕೊಳ್ಳಲು ಹೋಟೆಲ್ ವ್ಯವಸ್ಥೆಯನ್ನೂ ಮೊದಲೇ ಮಾಡಿಕೊಂಡು ಹೋಗುವುದು. ಕೆಲವರು ನೂರಾರು ಕಿ.ಮೀ.ಗಳಷ್ಟು ದೂರದ  ಬೈಕ್   ಸವಾರಿಯ  ಸಾಹಸಕ್ಕೆ ಕೈ ಹಾಕುವುದೂ ಇದೆ.
   ಆದರೆ ಖ್ಯಾತ ಲೇಖಕ ಶಶಿಧರ ಹಾಲಾಡಿಯವರು ತಮ್ಮ ಹೊಸ ಕೃತಿ ‘. ನನ್ನ  Solo ಟ್ರಿಪ್’ನಲ್ಲಿ ಹೇಳುತ್ತಿರುವುದು ಇಂಥ ಪ್ರವಾಸಗಳ ಬಗ್ಗೆ ಅಲ್ಲ. ಇದು ಅವರು ಎಳೆಯ ಹುಡುಗ ಹಾಗೂ   ಯುವಕರಾಗಿದ್ದ ಕಾಲದಲ್ಲಿ-ಅಂದರೆ ೧೯೭೦-೮೦ ರ ದಶಕಗಳಲ್ಲಿ – ಅವರ ಊರಾದ ಹಾಲಾಡಿಯ ಸುತ್ತುಮುತ್ತ, ಸಹ್ಯಾದ್ರಿ ಪ್ರದೇಶ, ವೃತ್ತಿಜೀವನ ಆರಂಭಿಸಿದ ಅರಸೀಕೆರೆಯ ಸುತ್ತುಮುತ್ತಲಿದ್ದ ಕಾಡು-ಗುಡ್ಡ-ಬೆಟ್ಟಗಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸೈಕಲ್ ಸವಾರಿಯ ಮೂಲಕ  ಏಕಾಂಗಿಯಾಗಿ  ಮಾಡಿದ ಪ್ರವಾಸಗಳ ಬಗ್ಗೆ.  ಆಗ ಇವತ್ತು ಎಲ್ಲೆಡೆ ಸಾಮಾನ್ಯವಾಗಿ ಬಿಟ್ಟಿರುವ ರಸ್ತೆಗಳು ಮತ್ತಿ ವಾಹನ ಸಂಪರ್ಕಗಳು ಏನೂ ಇರಲಿಲ್ಲ. ಹೋಟೆಲಿಗೆ ಖರ್ಚು ಮಾಡಲು ಧಾರಾಳ ಹಣವೂ ಇರುತ್ತಿರಲಿಲ್ಲ. ಅಲ್ಲದೆ ಎಳೆಯ ಹುಡುಗನಾಗಿದ್ದಾಗ ಮನೆಯಿಂದ ಅವರ ಅಮ್ಮಮ್ಮ ಒಬ್ಬನೇ ಹಾಗೆಲ್ಲ ತಿರುಗಾಡಲು ಸರ್ವಥಾ ಅನುಮತಿ ನೀಡುತ್ತಿರಲಿಲ್ಲ.
     ಬೆಟ್ಟ ಗುಡ್ಡ, ಹೊಲ-ಗದ್ದೆ, ದಟ್ಟ ಕಾಡುಗಳಿರುವ ಪ್ರದೇಶದಲ್ಲಿ ಒಂಟಿಯಾಗಿ ನಿಂತ ಲೇಖಕರ ಮನೆಯ ಪರಿಸರದ ಪ್ರಕೃತಿ ಸೌಂದರ್ಯವು ಅವರು ಬಹಳ ಚಿಕ್ಕವರಿರುವಾಗಲೇ ಅವರನ್ನು ಇನ್ನಿಲ್ಲದಂತೆ ಅಕರ್ಷಿಸಿತ್ತು. ಹಾಗೆ ಬಿಡುವು ಸಿಕ್ಕಿದಾಗಲೆಲ್ಲ ದೂರದಲ್ಲಿ ಕಾಣುವ ಗುಡ್ಡ ಬೆಟ್ಟಗಳನ್ನೇರಿ ಅಲ್ಲಿಂದ ಪ್ರಕೃತಿ ವೀಕ್ಷಣೆ ಮಾಡಬೇಕೆನ್ನುವ ಅನ್ವೇಷಕ ಬುದ್ದಿ ಯಿಂದ ಮನೆಯ ಹಿರಿಯರಾದ ‘ಹೆಡ್ ಮೇಡಂ'(ಅಮ್ಮಮ್ಮ) ಅವರ ಬಳಿ ಸುಳ್ಳು ಹೇಳಿ ಬೆಳಗ್ಗೆ ಮನೆ ಬಿಟ್ಟು ಸಂಜೆಯೊಳಗೆ ಮನೆ ಸೇರುತ್ತಿದ್ದರು. ಸಹ್ಯಾದ್ರಿಯ ತಪ್ಪಲಿನ ಬಾಳೆಬರೆ ಘಾಟ್ ಅವರು ನೋಡಿದ್ದು ಹೀಗೆ. ಹದಿಹರೆಯದ ಹುಡುಗ ಹೀಗೆ ಒಂಟಿಯಾಗಿ ನಿರ್ಜನ ರಸ್ತೆಯಲ್ಲಿ ನಡೆದು ಹೋಗುವ ಪರಿಪಾಠ ಅಂದು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೂ ಇರಲಿಲ್ಲ.
  ಒಮ್ಮೆ ಕಾಲೇಜು ಓದುತ್ತಿದ್ದಾಗ   ಶಿಲಾರೋಹಣದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ಅಂತಹ ಅನೇಕ ಸಾಹಸಗಳನ್ನು ಮಾಡಿ ಅನುಭವವಿದ್ದ ಶ್ರೀ ಜಿ.ಎನ್.ಅಶೋಕವರ್ಧನ್ ಬಂದಿದ್ದರು.    ಶಿಲಾರೋಹಣದ ನಿಜ ಅನುಭವ ಪಡೆಯಲು   ಅಸಕ್ತಿ ಇದ್ದವರು     ಉಜಿರೆಗೆ ಬಂದು ತಾನು ಕಟ್ಟುವ ತಂಡವನ್ನು ಸೇರಬಹುದೆಂದು   ಅವರು ಆಹ್ವಾನವಿತ್ತಾಗ ಲೇಖಕರು ಹಿಂದುಮುಂದು ನೋಡದೆ ಹೆಸರು ಕೊಟ್ಟರು. ಮನೆಯಲ್ಲಿ ತಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆಂದು ಸುಳ್ಳುಹೇಳಿ ಉಜಿರೆಗೆ ಹೋಗಿ ತಂಡವನ್ನು ಸೇರಿ ರಾತ್ರಿಯಿಡೀ ರಸ್ತೆಯಲ್ಲಿ ಕತ್ತಲಲ್ಲಿ ನಡೆದು   ಚಾರ್ಮಾಡಿ ಘಟ್ಟದಲ್ಲಿರುವ  ‘ಏರಿಗಲ್ಲನ್ನು’ ಏರಿ  ಕಚಗುಳಿಯಿಡುವ ಆ ಅನುಭವವನ್ನು ಪಡೆದೇ ಬಿಟ್ಟಿದ್ದರು.
   ಬ್ಯಾಂಕ್ ಉದ್ಯೋಗಕ್ಕೆ ಅರಸೀಕೆರೆಯ ಸಮೀಪದ ಒಂದು ಹಳ್ಳಿಗೆ ನಿಯುಕ್ತರಾದಾಗ ಬಿಡುವಿನ ದಿನಗಳೊಂದನ್ನೂ ಬಿಡದೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳನ್ನು ಹೆಚ್ಚಾಗಿ ಏಕಾಂಗಿಯಾಗಿ ಮತ್ತು ಕೆಲವೊಮ್ಮೆ ಒಬ್ಬರೋ ಇಬ್ಬರೋ ಗೆಳೆಯರೊಂದಿಗೆ ಎಕ್ಸ್ ಪ್ಲೋರ್ ಮಾಡಿದ್ದರು.‌ಆಗಿನ್ನೂ ಟಾರು ಹಾಕಿರದಿದ್ದ ಕಚ್ಚಾರಸ್ತೆಯಲ್ಲಿ  ಬಾಡಿಗೆ ಸೈಕಲ್ ತೆಗೆದುಕೊಂಡು ಎಂಟು-ಹತ್ತು ಕಿ.ಮೀ.ಪ್ರಯಾಣ ಮಾಡಿದ್ದರು. ಅಲ್ಲಿಂದ ಕೆಲವೊಮ್ಮೆ ಗೆಳೆಯನಿರುವ ಚಿಕ್ಕಮಗಳೂರಿಗೆ ಬಂದು ಮುಳ್ಳಯ್ಯನ ಗಿರಿ-ಬಾಬಾಬುಡನ್ ಗಿರಿ,  ಕಡೂರಿನ ಬಳಿಯ ‘ಮದಗದ ಕೆರೆ’  ಮೊದಲಾದೆಡೆಗಳಿಗೆ ಹೋಗಿ ಅವುಗಳಾಚೆಗಿನ ನಿರ್ಜನ ಪ್ರದೇಶಗಳಲ್ಲಿ ಪಾಳು ಬಿದ್ದ ದೇಗುಲಗಳನ್ನು ನೋಡಿದ್ದರು. ಬಾಬಾ ಬುಡನ್ ಗಿರಿಯ ಮೇಲೇರಿ ನೋಡಿ ಕೆಳಗಿಳಿಯುತ್ತಿದ್ದಾಗ ಕೆಳಗೆ ಹತ್ತಾರು ಮಂದಿ ಮುಸಲ್ಮಾನ ಯುವಕರು ಎಲ್ಲೋ ಹೋಗುತ್ತಿದ್ದುದನ್ನು ನೋಡಿ ಅವರು ಎಲ್ಲಿಗೆ ಹೋಗುತ್ತಿರುವುದೆಂದು ನೋಡುವ ಕುತೂಹಲದಿಂದ ಅವರ ಜತೆ ಸೇರಿ ನಡೆದಿದ್ದರು. ಇನ್ನೊಂದೆಡೆ ಬೃಹತ್ ಗಾತ್ರದ ಬಂಡೆಯ ಮೇಲೆ ಬಳ್ಳಿಗಳು ಹಬ್ಬಿಕೊಂಡಂಥ ರಚನೆಯನ್ನು ನೋಡಿ ಪ್ರಕೃತಿಯ ವೈಚಿತ್ರ್ಯಕ್ಕೆ ಬೆರಗಾಗಿದ್ದರು.
ಬೆಂಗಳೂರಿನ ಹೊರವಲಯದ ತುರಹಳ್ಳಿ  ಬಂಡೆಯನ್ನು ಏರುವ ಸಾಹಸವನ್ನು  ಅವರು ಮಾಡಿದ್ದು   ‘ಸ್ಪಾರ್ಕ್ಸ್’ಎಂಬ ಹವ್ಯಾಸಿ ತಂಡದ ಜತೆ ಸೇರಿಯಾಗಿತ್ತು.

    ಹುಟ್ಟಿ ಬೆಳೆದ ಸ್ಥಳಕ್ಕೆ ಸಮೀಪದಲ್ಲೇ ಇರುವ ಶಂಕರನಾರಾಯಣ ಮತ್ತು ಕೋಟಿಲಿಂಗೇಶ್ವರ ದೇವಸ್ತಾನಗಳಿಗೆ ಜಾತ್ರೆಯ ಸಮಯದಲ್ಲಿ ಏಕಾಂಗಿಯಾಗಿ ಹೋದದ್ದು,’ ಜಗತ್ಪ್ರಸಿದ್ಧ’ ವಂಡಾರು ಕಂಬಳ ಗದ್ದೆಗೆ ಹೋಗಿ ಅಂಚಿನಲ್ಲಿ ಉದ್ದಕ್ಕೂ ಅಕ್ಕಿ  ಚೆಲ್ಲಿ ಹರಕೆ ಸಲ್ಲಿಸಲು ಹೋಗಿದ್ದು ಎಲ್ಲವನ್ನೂ ಲೇಖಕರು ಸೋಲೋ ಟ್ರಿಪ್ಪಿನ ಲೆಕ್ಕಕ್ಕೆ ಸೇರಿಸುತ್ತಾರೆ. ಕಬ್ಬಿನಾಲೆ ಗ್ರಾಮದ ಕುಚ್ಚೂರಿನಲ್ಲಿರುವ ಬಂಧುಗಳ ಮನೆಯಿಂದ  ‘ನಾಯಿ ಬೆರಿ ‘ಬೆಟ್ಟಕ್ಕೆ ಮುಸ್ಸಂಜೆಯ ಹೊತ್ತು ಇಬ್ಬರು ಚಿಕ್ಕ ಹುಡುಗರೊಂದಿಗೆ ಹೋಗಿದ್ದು ಅವರಿಗೆ ಅಪಾರ ಸಂತೋಷ ಕೊಡುತ್ತದೆ.
  ಅಂಡಮಾನ್ ದ್ವೀಪಕ್ಕೆ ಹೋಗಬೇಕೆಂದು ಕನಸು ಕಂಡರೂ ಹಡಗಿನ ಟಿಕೆಟ್ ಸಿಕ್ಕದೆ ಮದರಾಸಿನಿಂದ ವಾಪಸ್ ಬಂದದ್ದು ಮಾತ್ರವಲ್ಲದೆ ಏಜೆಂಟ್ ಗೆ ಕೊಟ್ಟ ದೊಡ್ಡ ಮೊತ್ತದ ಹಣವನ್ನೂ ಕಳೆದುಕೊಂಡ ನೋವಿನ ಬಗ್ಗೆಯೂ ಇಲ್ಲಿ ಒಂದು ಲೇಖನವಿದೆ.
     ಈ ಕೃತಿಯು ಚೆನ್ನಾಗಿ ಓದಿಸಿಕೊಂಡು ಹೋಗಲು ಇನ್ನೊಂದು ಕಾರಣ ಲೇಖಕರು ನಡುನಡುವೆ ಸಾಂದರ್ಭಿಕವಾಗಿ ಹೇಳುವ ಇತರ ವಿಚಾರಗಳು. ಅಂದಿನ ದಿನಗಳಲ್ಲಿ ಪ್ರಕೃತಿ-ಪರಿಸರಗಳು ಹೇಗಿದ್ದವು, ರಸ್ತೆ ಗಳ ಇಲ್ಲದ ಊರಿನಲ್ಲಿ ಕಾಡುದಾರಿಗಳು ಹೇಗಿದ್ದವು, ಗ್ರಾಮೀಣ ಪ್ರದೇಶಗಳಲ್ಲಿ ಜನರ ಸ್ವಭಾವ ಮತ್ತು ಪರಸ್ಪರ ಸಂಬಂಧಗಳು ಹೇಗಿದ್ದವು   ಅಪರೂಪದ ಹೂವು-ಹಣ್ಣು- ಹಕ್ಕಿಗಳು ಎಲ್ಲೆಲ್ಲಿ ಕಾಣಸಿಗುತ್ತಿದ್ದವು ಮೊದಲಾದ ವಿವರಗಳು ಕೃತಿಯಲ್ಲಿ ಯಥೇಚ್ಛವಾಗಿ ಸಿಗುತ್ತವೆ. ದೇವಸ್ಥಾನಗಳ ಜಾತ್ರೆಯಲ್ಲಿ ಜನರನ್ನು ಆಕರ್ಷಿಸುವ.  ಅಂಗಡಿಗಳು, ಜನರ ಮುಗ್ಧ ಉತ್ಸಾಹ, ಮಕ್ಕಳ ಕುತೂಹಲಗಳು ಲೇಖನಗಳಿಗೆ ಬಣ್ಣ ಬಳಿಯುತ್ತವೆ. ಕಬ್ಬಿನಾಲೆಯ ಕುಚ್ಚೂರಿನ ಕೂಡು ಕುಟುಂಬದ ಕಥೆಯಂತೂ ಆಧುನಿಕರ ಪಾಲಿಗೊಂದು ಕನಸಿನ ಸ್ವರ್ಗವಾಗಿ ಕಾಣುತ್ತದೆ.
    ಇಡೀ ಕೃತಿಯಲ್ಲಿ ಲೇಖಕರ ಕಥನ ಶೈಲಿ ಅಕರ್ಷಕವಾಗಿದೆ.    ಲೇಖನಗಳಿಗೆ ಕೊಟ್ಟ ಶೀರ್ಷಿಕೆಗಳು ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿವೆ.   ಆದರೆ ಎಲ್ಲ ಲೇಖನಗಳನ್ನು ಒಟ್ಟಿಗೆ ಪರಿಗಣಿಸಿದಾಗ ಅಲ್ಲಲ್ಲಿ ಕೆಲವು ವಿಷಯಗಳ ಪುನರಾವರ್ತನೆಯಾಗುವುದನ್ನು ಕಾಣಬಹುದು. ಇದು ಅವರ ಎಲ್ಲ ಕೃತಿಗಳಲ್ಲೂ ಕಾಣುವ ಒಂದು ಸಾಮಾನ್ಯ ವಿಚಾರ. ಅವರು ಹುಟ್ಟಿ ಬೆಳೆದ ಹಳ್ಳಿ , ವೃತ್ತಿ ಆರಂಭಿಸಿದ ಜಾಗ, ಪತ್ರಿಕೋದ್ಯಮಿಯಾಗಿ ಸೇರಿದ ಊರುಗಳ ಉಲ್ಲೇಖ ಎಲ್ಲ ಕೃತಿಗಳಲ್ಲೂ ಬರುವುದರಿಂದ  ಅತ್ಮಕಥಾಂಶಗಳ ವಿಚಾರದಲ್ಲಿ ಪುನರಾವರ್ತನೆ ಅನಿವಾರ್ಯವೂ ಹೌದು.  ತರಗತಿಯಲ್ಲಿ ದಿನವೂ ಪಾಠ ಮಾಡುವ ಅಧ್ಯಾಪಕರು ತಮಗರಿವಿಲ್ಲದಯೇ ಕೆಲವು ವಿಷಯಗಳನ್ನು ಪುನರಾವರ್ತನೆ ಮಾಡಿ ಹೇಳುವಂತೆ ಲೇಖಕ ಹಾಲಾಡಿಯವರೂ ಮಾಡುತ್ತಾರೆ. ಅದರೆ ಅವು ಸಂದರ್ಭೋಚಿತವಾಗಿ ಬರುವುದರಿಂದ ಎಲ್ಲಿಯೂ ಆಭಾಸವೆನ್ನಿಸುವುದಿಲ್ಲ.
-ಪಾರ್ವತಿ ಜಿ.ಐತಾಳ್

 

Related Articles

error: Content is protected !!