Home » ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ
 

ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ

by Kundapur Xpress
Spread the love

ಭಾರತವು ತನ್ನ ಸಂಸ್ಕೃತಿ ಮತ್ತು ಹಬ್ಬಗಳಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನು ಮಾತನಾಡುವಂತೆಯೇ, ವಿವಿಧ ಪ್ರದೇಶಗಳಲ್ಲಿ ವಿಶೇಷ ಹಬ್ಬಗಳನ್ನು ಆಚರಿಸಲಾಗುತ್ತದೆ, ಅಂತಹ ಒಂದು ವಿಶೇಷ ಹಬ್ಬವೆಂದರೆ ಯುಗಾದಿ,

ಇದು ದಕ್ಷಿಣ ಭಾರತದಲ್ಲಿ ಭವ್ಯ ಉತ್ಸವದ ಸ್ಥಾನಮಾನವನ್ನು ಹೊಂದಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಯುಗಾದಿ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದದಂದು ಆಚರಿಸಲಾಗುತ್ತದೆ. ಈ  ಹಬ್ಬವನ್ನು ದಕ್ಷಿಣ ಭಾರತದಾದ್ಯಂತ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಹೊಸ ವರ್ಷದ ಆಗಮನದ ಸಂತೋಷವನ್ನು ಗುರುತಿಸಲು ಆಚರಿಸಲಾಗುತ್ತದೆ. ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೊಂಕಣಿ ಸಮುದಾಯದ ಜನರು ಈ ಹಬ್ಬವನ್ನು ಯುಗಾದಿ, ತಮಿಳುನಾಡಿನಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಗೋವಾದಲ್ಲಿ ಸಂವತ್ಸರ ಪಾಡ್ವ, ರಾಜಸ್ಥಾನದಲ್ಲಿ ಥಾಪನ, ಕಾಶ್ಮೀರದಲ್ಲಿ ನವರೆಹ್, ಮಣಿಪುರದಲ್ಲಿ ಸಜಿಬು ನೊಂಗ್ಮಾ ಪಂಬಾ ಎಂದು ಆಚರಿಸುತ್ತಾರೆ.
ರಾಮ ಮತ್ತು ಯುಧಿಷ್ಠಿರರ ಪಟ್ಟಾಭಿಷೇಕವೂ ಇದೇ ದಿನದಂದು ನಡೆಯಿತು ಎಂದು ಹೇಳಲಾಗುತ್ತದೆ.
ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ. ಯುಗ ಅಂದರೆ ಅವಧಿ; ಮತ್ತು ಆದಿ ಅಂದರೆ ಆರಂಭ. ಆದ್ದರಿಂದ, ಯುಗಾದಿ ಎಂದರೆ ಅಕ್ಷರಶಃ ಹೊಸ ವರ್ಷದ ಆರಂಭ.
ಯುಗಾದಿ ಸೃಷ್ಟಿಯ ಆರಂಭಕಾಲ. ಯುಗ ಮತ್ತು ಆದಿ ಶಬ್ದಗಳೇ ‘ಯುಗಾದಿ’ .ದಕ್ಷಿಣ ಭಾರತದಲ್ಲಿ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು ಉಡುಪಿ ಮಂಗಳೂರು ಕಡೆ ಉತ್ತರ ಭಾರತದ ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಯುಗಾದಿ ಹಬ್ಬವನ್ನು ವಸಂತ ಋತುವಿನ ಆರಂಭದೊಂದಿಗೆ ಆಚರಿಸುತ್ತಾರೆ. ಪ್ರತಿ ಹಬ್ಬ ಹುಣ್ಣಿಮೆಗಳನ್ನು ‘ಪ್ರಕೃತಿ’ ಯನ್ನು ಮೂಲವಾಗಿಟ್ಟುಕೊಂಡು ಆಚರಿಸುವುದರಿಂದ ಹಬ್ಬಗಳು ವಿಶೇಷವಾಗುತ್ತದೆ.

ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆಯು ಈ ರೀತಿ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು, ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿ, ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾಮಾತೆ, ಲಕ್ಷ್ಮಣನೊಂದಿಗೆ ಸಂತೋಷದಿಂದ ಅಯೋಧ್ಯೆಗೆ ಬಂದ ದಿನವೆಂದು, ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕದ್ದೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ, ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ಸಾ ವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು,ಆನಂತರ ಬ್ರಹ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದನೆಂದು, ಇಂಥ ಹಲವು ಶುಭಾರಂಭಗಳಿಂದ ‘ಯುಗಾದಿ ಆಚರಣೆ ಬಂದಿದೆ ಎಂದು ತಿಳಿಸಲಾಗಿದೆ.

ಯುಗಾದಿ ಪವಿತ್ರವಾದ ದಿನ, ನಮಗೆ ಎರಡು ಶಕೆಗಳಿವೆ, ಶಾಲಿವಾಹನ ಶಕೆ ವಿಕ್ರಮ ನಾಮಶಕೆ, ಎರಡು ರೀತಿಯ ಶಕೆಗಳನ್ನು ಉಪಾಸನೆ ಮಾಡುತ್ತೇವೆ. ನಮ್ಮ ದಕ್ಷಿಣ ಭಾರತದಲ್ಲಿ ಶಾಲಿವಾಹನ ಶಕೆ ಆಚರಣೆ ಇದ್ದರೆ ಉತ್ತರ ಭಾರತದ ಕಡೆ ವಿಕ್ರಮನಾಮಶಕೆ ಆಚರಿಸುತ್ತಾರೆ. ನಾವು ಸಂಕಲ್ಪ ಮಾಡುವಾಗ, ಪ್ರವರದಲ್ಲಿ, ‘ಶುಭೆ -ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ವೇ ವೈವಸ್ವತ ಮನ್ಮಂತರೇ- ಕಲಿಯುಗೇ, ಪ್ರಥಮಪಾದೇ, ಜಂಬೂದ್ವೀಪೇ, ಭಾರತವರ್ಷೇ, ಭರತಖಂಡೇ, ದಂಡ ಕಾರಣ್ಯ, ಗೋದಾವರ್ಯಾ: ದಕ್ಷಿಣ ತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರಮಾನೇನ ಪ್ರಭವಾದಿ ಷಷ್ಠಿಸಂವತ್ಸರೇ, ಈ ರೀತಿ ಸಂಕಲ್ಪ ಪ್ರವರಗಳಲ್ಲಿ, ಪೂಜೆ ಶುಭ ಕಾರ್ಯಗಳಲ್ಲಿ ಹೇಳಿಕೊಂಡೇ ಮಾಡುತ್ತೇವೆ. ಮೊದಲ ಐತಿಹಾಸಿಕ ಸಾಮ್ರಾಜ್ಯದ ಅರಸ ‘ಶಾಲಿವಾಹನ ತನ್ನ ಆಡಳಿತಾವಧಿಯಲ್ಲಿ ಧರ್ಮವನ್ನು ರಕ್ಷಣೆ ಮಾಡಿ ಸನಾತನ ಧರ್ಮವನ್ನು ಸ್ಥಾಪನೆ ಮಾಡಿದಂಥ ಮಹಾಪುರುಷ. ಶಾತ ಎಂದರೆ ಕುದುರೆ ಎಂದು ಕುದುರೆಯನ್ನು ವಾಹನವಾಗಿ ಉಳ್ಳವರೆಂದು ಹೇಳುತ್ತಾರೆ.ಶಾತವಾಹನರು ಬ್ರಾಹ್ಮಣ ಜಾತಿಗೆ ಸೇರಿದ್ದು, ವಿಷ್ಣು ಮತ್ತು ಮತ್ಸ ಪುರಾಣಗಳಲ್ಲಿ ಮಾಹಿತಿ ದೊರೆಯುತ್ತದೆ.

ಯುಗಾದಿಯಂದು ಬೇವು ಬೆಲ್ಲ ಕೊಡುವಾಗ ಸ್ತೋತ್ರವನ್ನು ಹೇಳುತ್ತಾರೆ.
ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್
ನೂರು ವರ್ಷಗಳ ಕಾಲ ವಜ್ರದೇಹಿಯಾಗಿರಲು, ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಠ ನಿವಾರಣೆಗಾಗಿಯೂ ಬೇವಿನ ಹೊಸ ಚಿಗುರನ್ನು ತಿನ್ನಬೇಕು.
ಈ ಹಬ್ಬದ ಸಮಯದಲ್ಲಿ ತಯಾರಿಸಲಾಗುವ ಅತ್ಯಂತ ವಿಶೇಷ ಖಾದ್ಯವೆಂದರೆ ಯುಗಾದಿ ಪಚಡಿ. ಇದನ್ನು ಆರು ವಿಭಿನ್ನ ಪದಾರ್ಥಗಳಿಂದ ತಯಾರಿಸಲಾಗುತ್ತದೆ, ಅವುಗಳೆಂದರೆ – ಹಸಿ ಮಾವು, ಉಪ್ಪು, ಕರಿಮೆಣಸು, ಹುಣಸೆಹಣ್ಣು, ಬೇವಿನ ಹೂವುಗಳು ಮತ್ತು ಬೆಲ್ಲ. ಯುಗಾದಿಯ ಸಂದರ್ಭದಲ್ಲಿ ಈ ಖಾದ್ಯವನ್ನು ತಯಾರಿಸುವ ಮುಖ್ಯ ಉದ್ದೇಶ ಮಾನವ ಜೀವನದಲ್ಲಿನ ಎಲ್ಲಾ ಭಾವನೆಗಳ ಮಿಶ್ರಣದ ಸಂದೇಶವನ್ನು ನೀಡುವುದು.ಸುಖ ದುಃಖ ಗಳನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದರೆ ಜೀವನವು ಸುಗಮವಾಗಿ ಸಾಗುವುದೆಂಬ ಸಂದೇಶ ಬೇವು ಬೆಲ್ಲದ ಸೇವನೆಯಲ್ಲಿ ಅಡಕವಾಗಿದೆ. ಪೂಜೆಯ ನಂತರ, ಈ ಕಷಾಯವನ್ನು ಎಲ್ಲರಿಗೂ ನೀಡಲಾಗುತ್ತದೆ. ಇದಲ್ಲದೆ, ಇದನ್ನು ಹತ್ತಿರದ ಜನರಲ್ಲಿಯೂ ವಿತರಿಸಲಾಗುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಹವಾಮಾನ ಬದಲಾವಣೆಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದು ಎಂದು ನಂಬಲಾಗಿದೆ.
ಹಬ್ಬದ ಆಚರಣೆಗಳಲ್ಲೂ ಆರೋಗ್ಯ ಸೂತ್ರವನ್ನು ಹೊಂದಿದ ಏಕೈಕ ದೇಶ ಭಾರತ. ಸಮಸ್ತ ಬಂಧು ಭಗಿನಿಯರಿಗೆ ಯುಗಾದಿ ಹಬ್ಬದ ಶುಭಾಶಯಗಳು

ಸ್ವರ್ಣಾ ಕುಂದಾಪುರ 

 

Related Articles

error: Content is protected !!