Home » “ಅಂತಃಪಥ ಯಾತ್ರೆ” “ವಿಶ್ವ ತತ್ತ್ವಶಾಸ್ತ್ರ ದಿನ”
 

“ಅಂತಃಪಥ ಯಾತ್ರೆ” “ವಿಶ್ವ ತತ್ತ್ವಶಾಸ್ತ್ರ ದಿನ”

by Kundapur Xpress
Spread the love

“ಅಂತಃಪಥ ಯಾತ್ರೆ” “ವಿಶ್ವ ತತ್ತ್ವಶಾಸ್ತ್ರ ದಿನ”

ಮಾನವ ಇತಿಹಾಸದ ಪಯಣವು ಕೇವಲ ಯುದ್ಧಗಳ, ವಿಜ್ಞಾನ ಆವಿಷ್ಕಾರಗಳ, ಸಮಾಜ ವ್ಯವಸ್ಥೆಗಳ ಕಥೆಯಲ್ಲ; ಅದು ‘ನಾನು ಯಾರು?’, ‘ಏಕೆ ಬದುಕಬೇಕು?’, ‘ಜಗತ್ತು ನಿಜವೇ?’ ಎಂಬ ನಿತ್ಯ ಪ್ರಶ್ನೆಗಳ ಹುಡುಕಾಟವೂ ಹೌದು. ಈ ಪ್ರಶ್ನೆಗಳ ಉತ್ತರಗಳನ್ನು ಹುಡುಕುವ ಮಾನವನ ಪ್ರಯತ್ನವೇ ತತ್ತ್ವಶಾಸ್ತ್ರ.

ಭಾರತ – ತತ್ತ್ವಶಾಸ್ತ್ರದ ತಾಯಿ
ಭಾರತ ವಿಶ್ವಕ್ಕೆ ಜ್ಞಾನ, ತತ್ವ, ಧರ್ಮ ಮತ್ತು ಚಿಂತನೆಯ ಬೆಳಕನ್ನು ಕೊಟ್ಟ ದೇಶ.
ವಿವೇಕ – ವಿವಾದ – ವಿವೇಚನೆ
ಉಪನಿಷತ್ತುಗಳಿಂದ ಬೌದ್ಧ, ಜೈನ, ವೇದಾಂತ, ಭಗವದ್ಗೀತೆಯವರೆಗೆ
‘ನಾನೇ ಸತ್ಯ’ವೆಂದು ಹೇಳದೆ;
‘ಸತ್ಯವೇ ದೊಡ್ಡದು, ನಾವು ಹುಡುಕುವವರು’ ಎಂಬ ವಿನಯದ ಪರಂಪರೆ ನಮ್ಮದು.
ಅಗಾಧ ಜ್ಞಾನಪರಂಪರೆಗೆ ಮುಕುಟಪ್ರಾಯದಂತಿರುವ ತತ್ತ್ವಶಾಸ್ತ್ರವು ಋಷಿಮುನಿಗಳ, ಸಾಧುಸಂತರ, ತತ್ತ್ವಜ್ಞಾನಿಗಳ, ದಾರ್ಶನಿಕರ ಅನುಭವ ಹಾಗೂ ಅನುಭಾವದ ಸತ್ಯದರ್ಶನವಾಗಿದೆ. ಭಾರತೀಯ ವಿದ್ವತ್ತಿನ ಮೇರು ಶಿಖರ ವೇದವ್ಯಾಸರು, ಯಾಜ್ಞವಲ್ಕ್ಯರು, ಉದ್ದಾಲಕರು ಆದಿ ಸದಾ ಕಂಗೊಳಿಸುತ್ತಿರುವ ದಿವ್ಯಪ್ರಭೆ .. ಶ್ರೀಕೃಷ್ಣನು ಗೀತೆಯಲ್ಲಿ ಅಧ್ಯಾತ್ಮವಿದ್ಯಾ ವಿದ್ಯಾನಾಂ ಎಂದು ಅಧ್ಯಾತ್ಮ ವಿದ್ಯೆಯ ಮಹತ್ತ್ವವನ್ನು ಇಡೀ ಮನುಕುಲಕ್ಕೇ ದರ್ಶಿಸಿದ್ದಾನೆ.

ಜಗತ್ತು, ಚೇತನತತ್ತ್ವ, ಜೀವತತ್ತ್ವ, ಆತ್ಮ ಸಾಕ್ಷಾತ್ಕಾರ ಆದಿ ವಿಚಾರಧಾರೆಗಳ ಪುಂಜವಾದ ತತ್ತ್ವಶಾಸ್ತ್ರದ ಜ್ಞಾನದ ಕಂಪು ಸರ್ವರಿಗೂ ಪಸರಿಸಬೇಕೆಂಬ ಧ್ಯೇಯದಿಂದ, ಪ್ರತಿ ವರ್ಷ ನವೆಂಬರ್ ತಿಂಗಳ ಮೂರನೇ ಗುರುವಾರದಂದು ವಿಶ್ವ ತತ್ತ್ವಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ ನವೆಂಬರ್ 21, 2002 ರಂದು ಯುನೆಸ್ಕೊ ಆಚರಿಸಿತು, 2005 ರಿಂದ ಇದು ಪ್ರಮುಖ ಅಂತಾರಾಷ್ಟ್ರೀಯ ದಿನವಾಗಿ ಘೋಷಿಸಲ್ಪಟ್ಟಿತು.

2001 ರಲ್ಲಿ ಗುಜರಾತಿನ ಭುಜ್ ನಲ್ಲಿ ಸಂಭವಿಸಿದ ತೀವ್ರ ಭೂಕಂಪದಲ್ಲಿ, ಸಕಲವನ್ನೂ ಕಳೆದುಕೊಂಡಿದ್ದವರಲ್ಲಿ ಒಬ್ಬ ವೃದ್ಧರು ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ರೀತಿ,”ಇರುವವರೆಗೆ ಇದೆಲ್ಲ ಇದ್ದದ್ದೇ”. ಇದು ಕರ್ತವ್ಯ ವೈರಾಗ್ಯದ ಪರಾಕಾಷ್ಠೆಯ ಗಹನವಾದ ವಿಚಾರವಲ್ಲವೇ..!!?? ಆಳವಾಗಿ ಚಿಂತಿಸಿದಾಗ ಈ ನುಡಿಗಳೇ ತತ್ತ್ವಶಾಸ್ತ್ರದ ಮೂಲವೆಂದು ಭಾಸವಾಗುವುದಲ್ಲವೇ…!?

ತತ್ತ್ವಶಾಸ್ತ್ರದಲ್ಲಿ ವೇದಗಳಂತಹ ಪ್ರಾಚೀನ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಆರು ದರ್ಶನಗಳು ಕಪಿಲಾಚಾರ್ಯರ ಸಾಂಖ್ಯ, ಪತಂಜಲಿ ಮುನಿಯ ಯೋಗ, ಗೌತಮ ಮುನಿಯ ನ್ಯಾಯ, ಕಣಾದ ಮುನಿಯ ವೈಶೇಷಿಕ, ಜೈಮಿನಿಯ ಪೂರ್ವ ಮೀಮಾಂಸಾ ಹಾಗೂ ಬಾದರಾಯಣರ ವೇದಾಂತ (ಉತ್ತರ ಮೀಮಾಂಸಾ) ಮತ್ತು ದರ್ಶನಗಳ ಉಪಭೇದಗಳು.

‘ದರ್ಶನ’ ಎಂದರೆ ಕೇವಲ ದೃಷ್ಟಿ ಅಥವಾ ನೋಡುವ ಕ್ರಿಯೆಯಲ್ಲ. ಇಂದ್ರಿಯಗಳಿಗೆ ನಿಲುಕುವ ವಸ್ತುಗಳಿಂದ ಆರಂಭಿಸಿ, ಸಾಮಾನ್ಯ ಬುದ್ಧಿಗೆ ನಿಲುಕದ ಪರತತ್ತ್ವದವರೆಗಿನ ಆಳವಾದ ತಾತ್ತ್ವಿಕ ಚಿಂತನೆ, ಪಾರಮಾರ್ಥಿಕ ಸತ್ಯದ ಅನ್ವೇಷಣೆಯ ಶಾಸ್ತ್ರಗಳೇ “ದರ್ಶನಗಳು”. ವೇದದ ಪ್ರಾಮಾಣ್ಯದ ಅಂಗೀಕಾರ ಮತ್ತು ಅನಂಗೀಕಾರದ ಮೇಲೆ ಆಸ್ತಿಕ(ವೈದಿಕ) ಮತ್ತು ನಾಸ್ತಿಕ(ಅವೈದಿಕ) ಎಂಬುದಾಗಿ ದರ್ಶನಗಳನ್ನು ಮುಖ್ಯವಾಗಿ ಎರಡು ವಿಧದಲ್ಲಿ ವಿಂಗಡಿಸಲಾಗಿದೆ. ಆಸ್ತಿಕ ದರ್ಶನಗಳು ಜಗತ್ತು ಸತ್ಯವೋ? ಮಿಥ್ಯೆಯೋ? ಜಗತ್ತಿನ ಸೃಷ್ಟಿ ಹೇಗೆ? ಲಯ‌ ಹೇಗೆ ?ನಾನು ಯಾರು ? ಜೀವವು ನಿತ್ಯವೋ ? ಅನಿತ್ಯವೋ? ಜೀವ ಪರಮಾತ್ಮನ ಸಂಬಂಧ, ಕರ್ಮಸಿದ್ಧಾಂತ, ಮೋಕ್ಷ ಪ್ರಾಪ್ತಿ ಹೇಗೆ ? ಹೀಗೆ ಹಲವಾರು ಪ್ರಶ್ನೆಗಳ ವಿಸ್ತೃತವಾದ ಚಿಂತನೆಯ ಗುಚ್ಛ .ಈ ಆರು ಆಸ್ತಿಕ ದರ್ಶನಗಳ ಜೊತೆಗೆ, ವೇದಗಳನ್ನು ಪ್ರಮಾಣವೆಂದು ಒಪ್ಪದ ಜೈನ, ಬೌದ್ಧ ಮತ್ತು ಚಾರ್ವಾಕ ದರ್ಶನಗಳನ್ನು ನಾಸ್ತಿಕ ದರ್ಶನಗಳೆಂದು ಪರಿಗಣಿಸಲಾಗಿದೆ.

ಚಾರ್ವಾಕ ಸಿದ್ಧಾಂತವು ಅಲೌಕಿಕ ಪರಿಕಲ್ಪನೆಗಳನ್ನು ತಿರಸ್ಕರಿಸುತ್ತದೆ ; ಇಂದ್ರಿಯ ಗ್ರಹಿಕೆಯ ಐಹಿಕ ಜೀವನವೇ ಸತ್ಯ ಎಂದು ಪರಿಗಣಿಸುತ್ತದೆ. ಶಾಸ್ತ್ರಗಳನ್ನು ಒಪ್ಪದೆ ಸ್ವೇಚ್ಛಾ ಪ್ರವೃತ್ತಿಯ ಸಮಾಜದ ಸೃಷ್ಟಿಗೆ ನಾಂದಿ ಹಾಡಬಾರದೆಂದು ಮತ್ತೆ ಬಂದ ಎಲ್ಲಾ ದಾರ್ಶನಿಕರು ಈ ಚಾರ್ವಾಕ ದರ್ಶನವನ್ನು ಖಂಡಿಸಿದರು.

ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಶ್ರಮಿಸಿ, ಪ್ರಚಾರ ಕಾರ್ಯದಲ್ಲಿ ನಿರತರಾದವರು ಅದ್ವೈತದ ಶ್ರೀಶಂಕರಾಚಾರ್ಯರು, ವಿಶಿಷ್ಟಾದ್ವೈತದ ಶ್ರೀರಾಮಾನುಜಾಚಾರ್ಯರು ಮತ್ತು ದ್ವೈತದ ಶ್ರೀಮಧ್ವಾಚಾರ್ಯರು.
ಕಾಲಾಂತರದಲ್ಲಿ ಶುದ್ಧಾದ್ವೈತವಾದ, ಪಾಶುಪತ ದರ್ಶನ, ಪ್ರತ್ಯಭಿಜ್ಞಾ ದರ್ಶನ, ಶಕ್ತಿವಿಶಿಷ್ಟಾದ್ವೈತ ಸಂಪ್ರದಾಯಗಳು ಅಸ್ತಿತ್ವಕ್ಕೆ ಬಂದುವು.

ಆಧುನಿಕ ಯುಗಕ್ಕೆ ಬಂದರೆ,
ರಾಮಕೃಷ್ಣ ಪರಮಹಂಸರು ಎಲ್ಲಾ ಧರ್ಮಗಳ ಐಕ್ಯತೆ, ಸಾಮರಸ್ಯ, ಸೇವೆ ಮತ್ತು ಅಸ್ತಿತ್ವದ ಏಕತೆಯ ಮೇಲೆ ಬೆಳಕು ಚೆಲ್ಲಿ, ಎಲ್ಲಾ ಧಾರ್ಮಿಕ ಪಥಗಳು ಪರಮಾತ್ಮನನ್ನು ತಲುಪುವ ವಿಭಿನ್ನ ಮಾರ್ಗಗಳು ಎಂದು ಬೋಧಿಸಿದರು.

ಸ್ವಾಮಿ ವಿವೇಕಾನಂದರು ಶಿಕ್ಷಣ, ಸ್ವಾವಲಂಬನೆ, ಯುವಜನರ ಅಂತರ್ಗತಶಕ್ತಿ , ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಿ, ಶ್ರೀ ರಾಮಕೃಷ್ಣ ಪರಮಹಂಸರ ಪರಿಕಲ್ಪನೆಯತೆ, ರಾಮಕೃಷ್ಣ ಮಿಷನ್ ಸ್ಥಾಪನೆಯ ಮೂಲಕ ಈ ಆದರ್ಶಗಳನ್ನು ಆಚರಣೆಗೆ ತಂದರು. ವಿಶ್ವದೆಲ್ಲೆಡೆ ನಮ್ಮ “ಸನಾತನ ಧರ್ಮದ ಸಾಂಸ್ಕೃತಿಕ ರಾಯಭಾರಿ” ಎನಿಸಿಕೊಂಡರು.

ತತ್ತ್ವಶಾಸ್ತ್ರಜ್ಞ, ಶಿಕ್ಷಣತಜ್ಞ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪಾಶ್ಚಿಮಾತ್ಯ ಟೀಕೆಗಳ ವಿರುದ್ಧ ಸನಾತನ ಧರ್ಮವನ್ನು ಸಮರ್ಥಿಸಿ, ಅದ್ವೈತ ವೇದಾಂತವನ್ನು ಆಧುನಿಕತೆಗೆ ತಕ್ಕಂತೆ ಮಂಡಿಸಿ, ಜಾಗತಿಕ ಮಟ್ಟದಲ್ಲಿ ಭಾರತೀಯ ಚಿಂತನೆಗೆ ಮನ್ನಣೆ ತಂದುಕೊಟ್ಟ ಮಹಾಚಿಂತಕರು.

ಚಾಣಕ್ಯ ನೀತಿ, ಶ್ರೀ ಅರವಿಂದರ ಸಮಗ್ರ ಯೋಗ ಭಾರತೀಯ ತತ್ತ್ವಶಾಸ್ತ್ರಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿತು. ಸಾಕ್ರೆಟೀಸ್, ಅರಿಸ್ಟಾಟಲ್ ಮುಂತಾದ ವಿದೇಶಿಯ ಮೇಧಾವಿಗಳು ಹಾಗೂ ನೀಲ್ಸ್ ಬೋರ್, ರಾಬರ್ಟ್ ಓಪೆನ್ ಹೈಮರ್ ಹೀಗೆ ಹಲವಾರು ಭೌತವಿಜ್ಞಾನಿಗಳೂ ಕೂಡ ತಮ್ಮ ಸಂಶೋಧನೆಯಲ್ಲಿ ಭಾರತೀಯ ತತ್ತ್ವಶಾಸ್ತ್ರದಿಂದ ಪ್ರಭಾವಿತರಾದವರು.

ಪರಮಾಣು ಬಾಂಬ್‌ನ ಪಿತಾಮಹ ರಾಬರ್ಟ್ ಓಪೆನ್ ಹೈಮರ್ ಪ್ರಪ್ರಥಮ ಪರಮಾಣು ಬಾಂಬನ್ನು ಪರಿಶೀಲಿಸಿದಾಗ, ಪರಮಾಣು ಶಕ್ತಿಯ ಸ್ಫೋಟದ ಭಯಂಕರ ಪರಿಣಾಮವನ್ನು ಕಂಡು,”ಈಗ ನಾನು ಮೃತ್ಯುವಾದೆ, ಈ ಜಗತ್ತನ್ನು ಸಂಹರಿಸುವ ಮೃತ್ಯು” ಎಂದು ಉಚ್ಚರಿಸಿದನಂತೆ. ಇದು ಭಗವದ್ಗೀತೆಯ….
ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ಧಃ
ಶ್ಲೋಕದ ವಾಕ್ಯಾರ್ಥ.

ತತ್ತ್ವಶಾಸ್ತ್ರವು ‘ವಸುಧೈವ ಕುಟುಂಬಕಂ’, ‘ತತ್ ತ್ವಂ ಅಸಿ’, ‘ಅಹಂ ಬ್ರಹ್ಮಾಸ್ಮಿ’ ಆದಿ ಆಧ್ಯಾತ್ಮಿಕ ಪರಿಕಲ್ಪನೆಗಳ ದಿವ್ಯ ಸಂದೇಶಗಳ ಜ್ಞಾನನಿಧಿ. ನಾಗಾಸಾಧುಗಳ ಅದ್ಭುತ ರಹಸ್ಯ , ಮೋದಿಯವರ ‘ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ’ ಎಂಬ ಪರಿಕಲ್ಪನೆಯಲ್ಲಿ ಭಾರತದಲ್ಲಿ ಆಯೋಜಿಸಲಾದ ಜಿ20 ಶೃಂಗ ಸಭೆಯ ಯಶಸ್ಸು ಆದಿ ಸ್ತುತ್ಯರ್ಹ.

ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ವಿಶ್ಲೇಷಣೆಯೇ ವ್ಯಾವಹಾರಿಕ (ಪ್ರಾಯೋಗಿಕ) ಮತ್ತು ಪಾರಮಾರ್ಥಿಕ (ಅತೀಂದ್ರಿಯ) ಸತ್ಯದ ನಡುವಿನ ವ್ಯತ್ಯಾಸವನ್ನು ತಿಳಿಸುವುದೇ ಆಗಿದೆ. ಅಂದರೆ ಆಂತರಿಕ ಶೂನ್ಯತೆಯನ್ನು ತುಂಬಲು ಪ್ರಯತ್ನಿಸದೆ, ನೋಡಲು ಪ್ರಯತ್ನಿಸುವ ಜೀವಿಗಳಾಗಬೇಕು‌. ಅದುವೇ ನಿಜವಾದ ಆತ್ಮದರ್ಶನ.

ಚರ್ಪಟನಾಥಶತಕದಲ್ಲಿ ಒಂದು ಮಾತಿದೆ…

ಭಿನ್ನಾ ಮಾರ್ಗಾ ಭಿನ್ನಾ ದೇವಾ ಭಿನ್ನಾ ಗುರುವೋ ಭಿನ್ನಾ ಸೇವಾ। ಭಿನ್ನಾ ವೇಷಾ ಭಿನ್ನಾ ಮುಕ್ತಿಃ ಮೋಹಸ್ಯ್ಯೆಷಾ ಸರ್ವಾ ಯುಕ್ತಿಃ”।।

ಮಾಯಾಪ್ರಪಂಚದಲ್ಲಿ ಈ ಎಲ್ಲಾ ಮೋಹದ ಆಟಗಳು ವಿಸ್ಮಯದಂತೆ ತೋರಿದರೂ ಅರಿವೆಂಬ ಜ್ಞಾನದಿಂದ ತನ್ನನ್ನು ತಾನು ಅರಿತು ತಾತ್ತ್ವಿಕ ಜ್ಞಾನಿಯಾಗಲು ನಾವೆಲ್ಲ ಪ್ರಯತ್ನಿಸೋಣ, ಚರಮಗುರಿಯೆಡೆಗೆ ಸಾಗೋಣ.

ಇಂದಿನ ಬದುಕಿನಲ್ಲಿ ತತ್ತ್ವಶಾಸ್ತ್ರದ ಅಗತ್ಯ
ಇಂದಿನ ಯುವ ಜನತೆ ಒತ್ತಡ, ಭಯ, ಸ್ಪರ್ಧೆ, ಮನೋವೈಕಲ್ಯಗಳಲ್ಲಿ ಹೋರಾಡುತ್ತಿದೆ.
ತತ್ತ್ವಶಾಸ್ತ್ರ ಹೇಳುವುದು:
“ಬಾಳನ್ನು ಗೆಲ್ಲು, ಆದರೆ ನಿನ್ನನ್ನು ಕಳೆದುಕೊಳ್ಳಬೇಡ.”
“ಸಂಪತ್ತು ಸಾಧನೆಯಾದರೂ, ಮೌಲ್ಯಗಳು ಬದುಕಿನ ಗೆಲುವು.”
“ಇತರರನ್ನು ಬದಲಾಯಿಸುವ ಮೊದಲು, ನಿನ್ನನ್ನು ಅರಿತುಕೊಳ್ಳು.”
ಅದಕ್ಕಾಗಿ ಇಂದಿನ ದಿನಗಳಲ್ಲಿ ಶಾಲೆ-ಕಾಲೇಜುಗಳಲ್ಲಿ
ವಿಚಾರ, ಚರ್ಚೆ, ಅನ್ವೇಷಣೆ ಮತ್ತು ಪ್ರಶ್ನಿಸುವ ಆತ್ಮವಿಶ್ವಾಸವನ್ನು ಬೆಳೆಸಬೇಕಾಗಿದೆ.
ಹೊರಗಿನ ಜಗತ್ತನ್ನು ನೋಡಲು ಕಣ್ಣು ಬೇಕು,ಆದರೆಒಳಗಿನ ಆತ್ಮವನ್ನು ನೋಡಲು ಚಿಂತನೆ ಬೇಕು.
ಜ್ಞಾನದಿಂದ ದೊಡ್ಡವನಾಗಬಹುದು,
ಆದರೆ ಮೌಲ್ಯಗಳಿಂದ ಮಹಾನ್ ಆಗಬಹುದು.
ಇತರರನ್ನು ಜಯಿಸುವುದು ಸುಲಭ,
ನಿನ್ನನ್ನು ನೀನೇ ಗೆಲ್ಲುವುದು ಕಷ್ಟ.
ಬದುಕು ಅರ್ಥಪೂರ್ಣವಾಗಬೇಕಾದರೆ
ಕನಸುಗಳಿಗೆ ದಿಕ್ಕು, ಭಾವನೆಗಳಿಗೆ ಮೌಲ್ಯ, ಕ್ರಮಗಳಿಗೆ ನೈತಿಕತೆ ಬೇಕು.
ಹಾಗಾಗಿ ಜಯ, ಸೋಲು, ಸಂಪತ್ತು, ನಷ್ಟ –ಇವೆಲ್ಲದರ ಮಧ್ಯದಲ್ಲೂ ಮನಸ್ಸನ್ನು ಶಾಂತವಾಗಿಡಲು ಕಲಿತರೆ…ಅದು ನಿಜವಾದ ತತ್ತ್ವ.
ತತ್ತ್ವಶಾಸ್ತ್ರವು ಪುಸ್ತಕಕ್ಕೆ ಮಾತ್ರ ಸೀಮಿತವಾದ ಜ್ಞಾನವಲ್ಲ;
ಬದುಕನ್ನು ತಿಳಿಯುವ ಯಾತ್ರೆ.
ಈ ಯಾತ್ರೆ ಮುಂದುವರಿಯಲಿ…
ಸಮಾಜ ಬೆಳಗಲಿ…
ಮಾನವನೊಳಗಿನ ಮಾನವತೆ ಬದುಕಿರಲಿ.
ವಿಶ್ವ ತತ್ತ್ವಶಾಸ್ತ್ರ ದಿನವು ನಮಗೆ ನೀಡುವ ಸಂದೇಶ – ಯೋಚಿಸು, ಪ್ರಶ್ನಿಸು, ಅರಿತುಕೊಳ್ಳು, ಬೆಳಗಿಸು, ಏಕೆಂದರೆ ಬದಲಾವಣೆಯ ಮೂಲ ಜಗತ್ತಲ್ಲ… ಮಾನವನ ಮನಸ್ಸೇ. ಮನುಜನು ಒಳಗಿಂದ ಬದಲಾಗುವಾಗ, ಸಮಾಜವು ಹೊರಗಿನಿಂದ ಬೆಳಗುತ್ತದೆ.

ವಿಶ್ವ ತತ್ತ್ವಶಾಸ್ತ್ರ ದಿನದ ಹಾರ್ದಿಕ ಶುಭಾಶಯಗಳು. ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

 

Related Articles

error: Content is protected !!