ಲವಕುಶರು ಹುಟ್ಟಿದ ಬಳಿಕ ವಾಲ್ಮೀಕಿ ಅವರೊಡನೆ ಲವಕುಶರು ಶ್ರೀ ರಾಮನ ಆಸ್ಥಾನಕ್ಕೆ ಆಗಮಿಸುತ್ತಾರೆ. ಶ್ರೀರಾಮ ಹೇಳಿದಂತೆ ಆತನ ಆಸ್ಥಾನದಲ್ಲಿ ಸೀತಾಮಾತೆಯು ಪರಿಶುದ್ಧೆ ಎಂದು ಶಪಥ ಮಾಡಲು ಅಣಿಯಾದ ಸಂದರ್ಭ ಆಕೆಯ ಒಂದೊಂದು ಮಾತುಗಳು ಕೂಡ ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸದೆ ಇರಲಾರವು.
ಸಮಗ್ರ ಅಯೋಧ್ಯೆಯ ಪ್ರಜೆಗಳಿಗೆ ನಮಿಸುತ್ತಾ, ನನ್ನ ದೇವರು ಶ್ರೀರಾಮಚಂದ್ರನ ಪಾದಗಳಿಗೆ ನಮಿಸುತ್ತಾ, ರಾಮನ ಕಡೆಗೆ ಮುಖ ಮಾಡಿ ನಿಂತು ಶ್ರೀ ರಾಮನನ್ನು ಉದ್ದೇಶಿಸಿ ಮಹಾಪ್ರಭು ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದೇನೆ. ಅಂತರಾಳದಿಂದ ನೀವು ನನ್ನನ್ನು ಪ್ರೀತಿಸುವುದು ನನಗೆ ವೇದ್ಯವಿದೆ. ಸೂರ್ಯವಂಶದ ಗದ್ದುಗೆಯನ್ನು ಏರಿದ ನೀವು ಹೆಂಡತಿಯ ವಿಷಯದಲ್ಲಿ ನ್ಯಾಯ ನಿಷ್ಟುರತೆಯನ್ನು ಪ್ರದರ್ಶಿಸಲಿಲ್ಲ ಎಂದು ಬರಬಹುದಾದ ಆಪಾದನೆಯನ್ನು ಗಮನಿಸಿ ಲಕ್ಷ್ಮಣನೊಡನೆ ನನ್ನನ್ನು ಕಾಡಿಗೆ ಕಳುಹಿಸಿರುವಿರಿ. ಆ ದುಃಖಕರ ಸನ್ನಿವೇಶವನ್ನು ನಿಮಗೆ ನೋಡಲು ಕಷ್ಟವಾದುದರಿಂದಲೇ ವನಕ್ಕೆ ತೆರಳುವಾಗ ನೀವು ಮುಖ ತೋರಿಸಲೇ ಇಲ್ಲ. ರಾಜಾಜ್ಞೆ ಪ್ರಕಾರ ನಿಮ್ಮ ಮುಂದೆ ನಾನು ಪ್ರತಿಜ್ಞೆ ಮಾಡಿದರು ನಾಳೆಯ ಸಮಾಜ ಇನ್ನೇನು ನಮ್ಮ ವಿಚಾರವಾಗಿ ಹೇಳಬಹುದು ಏನೋ ? ಹಾಗಿರುವಾಗ ನಾನಿದ್ದಷ್ಟು ದಿವಸ ಈ ಅಪವಾದ ತಪ್ಪಿದ್ದಲ್ಲ. ಸ್ವಾಮಿ ಅರೆಕ್ಷಣ ಯೋಚಿಸಿರಿ ನೀವೇ ಈಗ ಸಭೆಯಲ್ಲಿ ಪ್ರಕಟಿಸಿದಂತೆ ದಶಕಂಠನ ವಧೆಯ ತರುವಾಯ ಏಕಪಕ್ಷಿಯವಾಗಿ ನನ್ನನ್ನು ನೀವು ಸ್ವೀಕರಿಸಲಿಲ್ಲ. ನನ್ನ ಪತಿವ್ರತ ಧರ್ಮದಲ್ಲಿ ಕಳಂಕವಿದ್ದರೆ ಯಜ್ಞೇಶ್ವರನು ನನ್ನನ್ನು ದಹಿಸಲಿ ಎಂದು ಪ್ರತಿಜ್ಞೆ ಮಾಡಿ ಉರಿಯುವ ಅಗ್ನಿಕುಂಡಕ್ಕೆ ಹಾರಿದೆ.
ಕ್ಷಣ ಮಾತ್ರದಲ್ಲಿ ದಹಿಸಬಲ್ಲ ಅಗ್ನಿದೇವನು ನಾನು ಮುಡಿದಿರುವ ಹೂವನ್ನು ಬಾಡಲು ಅವಕಾಶ ಮಾಡಿಕೊಡದೆ ನಿಮಗೆ ನನ್ನನ್ನು ಒಪ್ಪಿಸಿದನಲ್ಲವೇ ? ಮಹಾ ಪತಿವ್ರತಿಯಾದ ಈಕೆಯ ಕೇಶವನ್ನು ಸೋಕಲಾರೆ ಎಂಬುದಾಗಿ ನಿಮ್ಮಲ್ಲೂ ನಿವೇದಿಸಿಕೊಂಡನು ಅಲ್ಲವೇ ? ಹಾ, ಇನ್ನೊಮ್ಮೆ ನನ್ನಿಂದಾಗಿ ನಿಮ್ಮ ಮೇಲೆ ಆಪಾದನೆ. ಆಪಾದನೆಯ ಹೊರೆಯನ್ನು ಹೊತ್ತ ಈ ಆಪಾದಿತಳು ಎಷ್ಟೊಂದು ಸಹಿಸಿಕೊಳ್ಳಬಹುದು? ಇಂದು ನಾನು ಶುದ್ಧಾತ್ಮಳು ಎಂದು ಪ್ರತಿಜ್ಞೆ ಮಾಡಿದರು ಭವಿಷ್ಯದಲ್ಲಿ ಯಾರು ಅಪಸ್ವರ ಎತ್ತಲಾರರು ಎಂಬುದಕ್ಕೆ ಏನು ಆಧಾರ ? ಹೇ ಪ್ರಾಣೇಶ ಧರ್ಮ, ಅರ್ಥ, ಕಾಮಗಳಲ್ಲಿ ಈ ಕ್ಷಣದವರೆಗೆ ನಿಮ್ಮ ಸಹಚರಿಯಾದೆ. ನಿಮ್ಮನ್ನೇ ಅನುಸರಿಸಿದೆ. ಅದೇಕೋ ಇನ್ನು ಸಾಕು ಎಂಬ ಭಾವನೆ ಮನದಲ್ಲಿ ಬೆಳೆಯುತ್ತಿದೆ. ಈ ಅಡ್ಡಗೋಡೆಯನ್ನು ಮುರಿಯುವಷ್ಟು ಸಶಕ್ತಳಲ್ಲ ನಾನು. ಜನಕಿ ಜನನಿಯರ ಋಣವನ್ನು ತೀರಿಸಿದ್ದೇನೆ. ವಿವಾಹವಾಗಿ ಸೇರಿದ ಮನೆಯ ಋಣದಿಂದ ಮುಕ್ತಳಾಗಿದ್ದೇನೆ . ಮಹಾಪ್ರಭು ದೇವತೆಗಳಿಗೆ ಸಮಾನರಾದ ಕುಮಾರ ದ್ವಯರನ್ನು ನಿಮಗೆ ಒಪ್ಪಿಸಿದ್ದೇನೆ. ಪರಮ ಪುನೀತರಾದ ವಾಲ್ಮೀಕಿ ಋಷಿಗಳಿಂದ ಮತ್ತು ಜೀವನದ ಸರ್ವಸ್ವ ಎಂದು ಪ್ರೀತಿಸಿದ ನಿಮ್ಮಿಂದ ವಿದಾಯವನ್ನು ಹೇಳುವ ಸಮಯ ಒದಗಿದೆ . ಸಭಿಕರೇ ಇನ್ನೊಮ್ಮೆ ನಾನು ಸತ್ಯವನ್ನು ದೃಢಪಡಿಸಬೇಕಾದ ಅನಿರೀಕ್ಷಿತ ಸಂದರ್ಭವಿದು. ದಶರಥರಾಯನ ಜೇಷ್ಠ ಪುತ್ರ ಅಯೋಧ್ಯಾ ಅಧಿಪತಿ ಶ್ರೀರಾಮ ಒಬ್ಬರನ್ನೇ ತ್ರಿಕರಣ ಪೂರ್ವಕವಾಗಿ ಆರಾಧಿಸುತ್ತೇನೆ ಹೊರತು ಇನ್ನೊಬ್ಬನನ್ನಲ್ಲ . ಇದು ಪೂರ್ಣವಾದ ಸತ್ಯವಾಗಿರುವುದಾದರೆ ಮಾಧವನ ಸತಿ ಮಾಧವಿಯು ನನ್ನನ್ನು ಸ್ವೀಕರಿಸಲಿ . ನನ್ನ ವಚನಗಳು ಸತ್ಯವಾದರೆ ದರಿತ್ರಿಯು ನನ್ನನ್ನು ಕರೆದೊಯ್ಯಲಿ. ಸೀತಾಮಾತೆಯ ಈ ಮಾತು ಮುಗಿದೊಡನೆ ಭೂದೇವಿಯು ತನ್ನ ಒಡಲಿಂದ ಮೇಲೆ ಬಂದು ಸೀತೆಯನ್ನು ತನ್ನ ಭೂಗರ್ಭದೊಳಗೆ ಸೇರಿಸಿಕೊಂಡಳು. ಒಂದು ಸಲ ಈ ಸಂದರ್ಭವನ್ನು ಓದಿ ನೋಡಿ ಇಂಥವರ ಕಣ್ಣಲ್ಲೂ ಎರಡು ಹನಿ ಕಣ್ಣೀರು ಬರದೆ ಇರಲಾರದು . ಸೀತಾ ಮಾತೆ ಪಂಚ ಪತಿವ್ರತ ಶಿರೋಮಣಿಗಳಲ್ಲಿ ಆಕೆಯು ಒಬ್ಬರು.
ಪ್ರದೀಪ್ ಕುಮಾರ್ ಕೋಮುಂಜೆ

