ಉಡುಪಿ : ಮಧ್ವಾಚಾರ್ಯರು ಶ್ರೀಕೃಷ್ಣ ಪೂಜೆ ನಿಟ್ಟಿನಲ್ಲಿ ಆರಂಭಿಸಿದ ಎರಡು ತಿಂಗಳ ಪರ್ಯಾಯವನ್ನು ಎರಡು ವರ್ಷಕ್ಕೆ ವಿಸ್ತರಿಸುವ ನಿರ್ಣಯಕ್ಕೆ ಅಷ್ಟ ಮಠಗಳ ಒಮ್ಮತವೇ ಸೋದೆ ಶ್ರೀವಾದಿರಾಜ ತೀರ್ಥರ ಪವಾಡಕ್ಕೆ ಸಾಕ್ಷಿ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಹೇಳಿದ್ದಾರೆ. ಶ್ರೀಪಾದರು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ಮೂಲ ಯತಿ ಶ್ರೀಉಪೇಂದ್ರ ತೀರ್ಥರ ಆರಾಧನೆ ಹಾಗೂ ಸೋದೆ ಶ್ರೀವಾದಿರಾಜ ತೀರ್ಥ ಶ್ರೀಪಾದರ ಜಯಂತಿ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು
ಸೋದೆ ಶ್ರೀವಾದಿರಾಜ ಯತಿಗಳು ಸಮಾಜದಲ್ಲಿ ಯತಿಗಳು ಹೇಗಿರಬೇಕೆಂಬುದಕ್ಕೆ ಮಾದರಿಯಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಸಾಧನೆ ಶ್ರೀವಾದಿರಾಜರ ಹಿರಿಮೆ. ಯತಿ ಪ್ರಪಂಚಕ್ಕೆ ಮಾದರಿಯಾದ ಮಧ್ಯಾಚಾರ್ಯರ ಪರಿಪೂರ್ಣತೆಯ ಪ್ರತಿರೂಪವೇ ವಾದಿರಾಜರು ಎಂದು ಶ್ರೀಪಾದರು ನುಡಿದರು
ಮಹಿತೋಷ್ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಧ್ವೇಶಾಚಾರ್ಯರಿಂದ ಉಪನ್ಯಾಸ ನಡೆಯಿತು. ಇದಕ್ಕೂ ಮೊದಲು ಮಧ್ವ ಮಂಟಪದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಕೀರ್ತನೆಗಳ ಗಾಯನ, ತುಶಿ ಮಾಮ ವತಿಯಿಂದ ಮಧ್ವ ಯಾನ ಗಾನ ನಮನ, ರಥಬೀದಿಯಲ್ಲಿ ಶ್ರೀವಾದಿರಾಜರ ಚಿತ್ರ, ಗ್ರಂಥವನ್ನು ನವರತ್ನ ರಥದಲ್ಲಿಟ್ಟು ಮೆರವಣಿಗೆ ನಡೆಯಿತು

