ಉಡುಪಿ : ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಪ್ರದೇಶದಿಂದ ವಲಸೆ ಬಂದು ಉತ್ತರ ಅಮೇರಿಕಾದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ವಿಪ್ರ ಕುಟುಂಬಗಳನ್ನು ಒಟ್ಟು ಸೇರಿಸಿ, ಅಮೇರಿಕಾದಲ್ಲಿ ನೆಲೆಸಿರುವ ಮುಂದಿನ ತಲೆಮಾರಿನವರಿಗೂ ಶಿವಳ್ಳಿ/ಊರಿನ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮಾಡಿಸುತ್ತಾ, ಆ ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಹುಟ್ಟುಹಾಕಿರುವ “ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕಾ” ಎಂದಿನಂತೆ ಏಪ್ರಿಲ್ 27-28, 2024 ರಂದು ಈ ವರ್ಷದ ಸೌರಮಾನ ಯುಗಾದಿ ಹಬ್ಬದ ಸಂಭ್ರಮ 2024 ಆಚರಣೆಯನ್ನು ಡಿಜಿಟಲ್ ವರ್ಚುಯಲ್ ವೇದಿಕೆಯಲ್ಲಿ ನಡೆಸಿದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.
ಉಡುಪಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣನ ಆರಾಧನೆ ಮಾಡುವುದರಿಂದ ಬರುವ ಸಂಕಷ್ಟವೆಲ್ಲ ದೂರವಾಗಿ, ಮನಸ್ಸಿನ ಅಭೀಷ್ಟಗಳು ಪೂರ್ಣವಾಗಿ, ಲೋಕಕ್ಕೆ ಕ್ಷೇಮವಾಗುವುದು ಎಂದು ತಮ್ಮ ನಾಲ್ಕನೆಯ ಪರ್ಯಾಯವನ್ನು ನಡೆಸುತ್ತಿರುವ ಪೂಜ್ಯ ಪುತ್ತಿಗೆ ಶ್ರೀಗಳು ತಮ್ಮ ಸಂದೇಶದಲ್ಲಿ ಮಾತನಾಡುತ್ತ ಉತ್ತರ ಅಮೇರಿಕಾದ ಶಿವಳ್ಳಿ ಕುಟುಂಬದ ಎಲ್ಲ ಸದಸ್ಯರಿಗೂ ಒಳ್ಳೆಯದಾಗಲಿ ಎಂದು ಹರಸಿದರು.
ನಮ್ಮ ಊರಿನ ಸಂಸ್ಕೃತಿಯನ್ನು ಉಳಿಸುಕೊಳ್ಳುವುದರ ಜೊತೆಗೆ, ತಮ್ಮ ಪೀಳಿಗೆಯ ಮುಂದಿನ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವ ಜೊತೆ ಜೊತೆಗೆ, ಶ್ರೀರಾಮಚಂದ್ರನಿಗೆ ಅತಿಪ್ರಿಯವಾದ ದೇಶ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿ ಕೊಳ್ಳುತ್ತಿರುವ ಉತ್ತರ ಅಮೇರಿಕಾದ ಶಿವಳ್ಳಿ ಕುಟುಂಬದ ಸದಸ್ಯರಿಗೆಲ್ಲ ಉಡುಪಿಯ ಶ್ರೀಕೃಷ್ಣನ ಮತ್ತು ಅಯೋದ್ಯೆಯ ಶ್ರೀರಾಮನ ಪೂರ್ಣ ಅನುಗ್ರಹವಿರಲಿ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿಯವರು ಯುಗಾದಿಯ ಶುಭ ಸಂದೇಶದಲ್ಲಿ ತಿಳಿಸಿದರು.
ಆಸ್ಟಿನ್ ಶ್ರೀಕೃಷ್ಣ ಮಠದ ಮುಖ್ಯ ಅರ್ಚಕರಾದ ಶ್ರೀ ಅವಿನಾಶ್ ಆಚಾರ್ಯರವರು ಕ್ರೋಧಿ ಸಂವತ್ಸರದ ರಾಶಿ ಫಲ ವಾಚಿಸಿ, ಕೊನೆಗೆ ನಾವು ಪ್ರತಿನಿತ್ಯ ಜಪ ಪೂಜೆಗಳನ್ನು ತಪ್ಪದೆ ಮಾಡಿದಲ್ಲಿ ರಾಶಿಫಲದಲ್ಲಿ ತೊಡಕು ಇದ್ದರೂ, ಭಗವಂತನ ಕೃಪಾಕಟಾಕ್ಷ ನಮಗೆ ಖಂಡಿತ ದೊರೆಯುವುದು ಎಂದು ತಿಳಿಸಿದರು.
ಸಂವತ್ಸರ ಅಂದರೆ ಸಂಕ್ರಾಂತಿಯ ಮರುದಿನ, ವತ್ಸರ ಅಥವಾ ವಸಂತ ಆದರೂ 2 ಮಾನಗಳು ತುಂಬಾ ಅಗತ್ಯ, ಅದೇ ರೀತಿ ವರ್ಷದಲ್ಲಿ 3 ಅಭ್ಯಂಗ ಸ್ನಾನ ಮಾಡುವುದು ಪ್ರತಿಯೊಬ್ಬರಿಗೆ ಅತ್ಯಗತ್ಯ, ಅದು ಯಾವುದೆಂದರೆ ಸೌರಮಾನ ಯುಗಾದಿ, ಚಾಂದ್ರಮಾನ ಯುಗಾದಿ ಮತ್ತು ನರಕ ಚತುರ್ದಶಿ. ಹಾಗಾಗಿ ಸೌರಮಾನ ಮತ್ತು ಚಾಂದ್ರಮಾನ ಎರಡು ಯುಗಾದಿಗಳನ್ನು ನಾವೆಲ್ಲಾ ಮಾಡಬೇಕು ಎಂಬ ಕಿವಿ ಮಾತನ್ನು ತಿಳಿಸುವುದರ ಜೊತೆಗೆ ವಿಷುಕಣಿ, ಪಂಚಾಂಗ ಶ್ರವಣ ಮತ್ತು ಯುಗಾದಿಯ ಮಹತ್ವವನ್ನು ಮುಖ್ಯ ಅತಿಥಿಗಳಾದ ವಿದ್ವಾನ್ ಕೃಷ್ಣರಾಜ್ ಭಟ್ ಕುತ್ಪಾಡಿಯವರು ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.
ಭರತನ ನಾಟ್ಯಶಾಸ್ತ್ರದಲ್ಲಿ ಬ್ರಹ್ಮನೇ ಸೃಷ್ಟಿಸಿದ ಐದನೇ ವೇದ ನಾಟ್ಯವೇದ ಇಂದು ಕಲೆಗಳೊಂದಿಗೆ ಜೀವಂತವಾಗಿದೆ ಎಂದು ಮತ್ತೋರ್ವ ಅತಿಥಿ ವಿಧೂಷಿ ಭ್ರಮರಿ ಶಿವಪ್ರಕಾಶ್ ತಿಳಿಸುತ್ತ, ಈ ಕಲೆಯನ್ನು ನಾವು ಉಳಿಸಿ ಬೆಳೆಸೋಣ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಶ್ರೀಶ ಜಯಸೀತಾರಾಂ ಮತ್ತು ಡೈರೆಕ್ಟರ್ ಗಳಾದ ರಾಜೇಂದ್ರ ಕೆದ್ಲಾಯ, ಮನಮೋಹನ್ ಕಟಪಾಡಿ, ಹಾಗೂ ಪ್ರಶಾಂತ ಕುಮಾರ್ ಅವರು ಶಿವಳ್ಳಿ ಕುಟುಂಬ ಉತ್ತರ ಅಮೇರಿಕಾದ ಮೂಲ ಉದ್ದೇಶಗಳು, ಕುಟುಂಬದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕುಟುಂಬದ ಅಧ್ಯಕ್ಷರಾದ ಸಂತೋಷ್ ಗೋಳಿ ಮತ್ತು ಉಪಾಧ್ಯಕ್ಷರಾದ ಪ್ರಕಾಶ್ ಉಡುಪರವರು ವಿನೂತನ ಶೈಲಿಯಲ್ಲಿ ಈ ವರ್ಷದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು, ಮುಂದಿನ ವರ್ಷದಲ್ಲಿ ಕಾರ್ಯಕಾರಿ ಸಮಿತಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತ, ಎಲ್ಲ ಸದಸ್ಯರ ಸಹಕಾರವನ್ನು ನೀಡಬೇಕೆಂದು ಕೋರಿದರು.
ಬಳಿಕ ಉತ್ತರ ಅಮೇರಿಕಾದ ಶಿವಳ್ಳಿ ಕುಟುಂಬದ ಸದಸ್ಯರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಳಗದ ಪ್ರಬುದ್ಧ ಗಾಯಕ, ಗಾಯಕಿಯರೆಲ್ಲರ ಶಾಸ್ತ್ರೀಯ ಗಾಯನಗಳು, ನೃತ್ಯ, ಭರತನಾಟ್ಯ, ವಿಶೇಷವಾಗಿ ಕುಟುಂಬದ ಎಳೆಯ ಮಕ್ಕಳು ಪ್ರಸ್ತುತ ಪಡಿಸಿರುವ ಎಲ್ಲ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಮತ್ತು ನೃತ್ಯ ಪ್ರದರ್ಶನ ಅತ್ಯಂತ ಉತ್ತಮಮಟ್ಟದಾಗಿತ್ತು. ಶಿವಳ್ಳಿ ಕುಟುಂಬದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸಂದೇಶ್ ಭಾರ್ಗವ್ ರವರು ಸ್ವಾಗತ ಭಾಷಣ ಮಾಡಿದರು. ಮತ್ತೊಬ್ಬ ಸದಸ್ಯರಾದ ಮೇಘ ರಾವ್ ರವರು ಧನ್ಯವಾದ ಸಮರ್ಪಣೆ ಮಾಡಿದರು.