ಬೆಂಗಳೂರು : ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸೋಮವಾರ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹಿಸಿದ ಮುಖ್ಯಮಂತ್ರಿಗಳು, ಹಾಲಿನ ದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂದು ಎಂದು ಸೂಚಿಸಿದ್ದಾರೆ.
ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿಗಳು ಹೇಳಿದರು.

