ಬೆಂಗಳೂರು : ತುಂಗಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದೆ. ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ತುಂಗಭದ್ರಾ ನೀರಾವರಿ ನಿಗಮ ನಮ್ಮೊಬ್ಬರ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕೇಂದ್ರ ಹಾಗೂ ಮೂರು ರಾಜ್ಯಗಳ ಸದಸ್ಯರು ಇದರಲ್ಲಿ ಇರುತ್ತಾರೆ. ಗೇಟ್ ಚೈನ್ ಕಿತ್ತು ಹೋದ ಪ್ರಕರಣದ ಬಗ್ಗೆ ಎಲ್ಲರಿಗೂ ತಕ್ಷಣ ಮಾಹಿತಿ ನೀಡಲಾಯಿತು ಎಂದರು
ಅಣೆಕಟ್ಟೆ ಸುರಕ್ಷತಾ ಸಮಿತಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತಹ ತಂತ್ರಜ್ಞರು ಇದ್ದರು. ಅವರ ಬಳಿ ಚರ್ಚೆ ನಡೆಸಿ, ನಂತರ ನಕ್ಷೆಯನ್ನು ತೆಗೆಸಿ ಅದರಂತೆ ಗೇಟ್ ತಯಾರಿಸುವವರ ಬಳಿ ಮಾತನಾಡಲಾಯಿತು. ನಾನೇ ಖುದ್ದಾಗಿ ಜಿಂದಾಲ್ ಕಾರ್ಖಾನೆಯವರ ಬಳಿ ಮಾತನಾಡಿದೆ. ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಸಂಪೂರ್ಣ ತಂಡ ಬಂದು ಕೆಲಸ ಪ್ರಾರಂಭ ಮಾಡಿದೆ. 50-60 ಟಿಎಂಸಿ ನೀರನ್ನು ಉಳಿಸಲು, ರೈತರಿಗೆ ಒಂದು ಬೆಳೆಗಾದರೂ ನೀರು ಕೊಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

