Home » ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ : ಕುತ್ಯಾರು ನವೀನ್ ಶೆಟ್ಟಿ
 

ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ : ಕುತ್ಯಾರು ನವೀನ್ ಶೆಟ್ಟಿ

ಜಿಲ್ಲಾ ಬಿಜೆಪಿಯಿಂದ 'ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು' ಅಭಿಯಾನಕ್ಕೆ ಚಾಲನೆ

by Kundapur Xpress
Spread the love

ಬಿಜೆಪಿ ಕೇವಲ ಪ್ರಚಾರಕ್ಕಾಗಿ ಅಥವಾ ವರದಿಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ತತ್ವ ಸಿದ್ಧಾಂತಗಳಡಿ ಶೃದ್ದೆ ಮತ್ತು ಬದ್ಧತೆಯಿಂದ ಅಭಿಯಾನಗಳನ್ನು ಯಶಸ್ವಿಗೊಳಿಸುತ್ತದೆ. ವಿರಮಿಸದೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.

ಅವರು ‘ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು’ ಅಭಿಯಾನದ ಅಂಗವಾಗಿ ಜಿಲ್ಲಾ ಬಿಜೆಪಿ ನೇತೃತ್ವ ಹಾಗೂ ಜಿಲ್ಲಾ ರೈತ ಮೋರ್ಚಾ ಸಹಯೋಗದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಅಭಿಯಾನಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಹೊಸ ತಂಡ ರಚನೆಯಾಗಿದೆ. ಟೀಕೆಗಳಿಗೆ ಉತ್ತಮ ಕೆಲಸದ ಮೂಲಕ ಉತ್ತರ ನೀಡೋಣ. ಸಂಪರ್ಕ, ಪ್ರವಾಸ ಮತ್ತು ಸಭೆಗಳಿಗೆ ಒತ್ತು ನೀಡಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ನಡೆಯಬೇಕು. ಎಲ್ಲರೂ ಒಟ್ಟಾಗಿ ಒಂದಾಗಿ ಪಕ್ಷದ ಸಂಕಲ್ಪ, ಉದ್ದೇಶವನ್ನು ಕಣ್ಣ ಮುಂದೆ ಇಟ್ಟುಕೊಂಡು ಜಿಲ್ಲೆಯಲ್ಲಿ ಬಿಜೆಪಿಯನ್ನು ಇನ್ನಷ್ಟು ಸದೃಢಗೊಳಿಸೋಣ. ಸಂಘಟಿತ ಪರಿಶ್ರಮದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.

ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ 2014ರ ಮೊದಲು ದೇಶದಲ್ಲಿ ಯಾವ ರೀತಿಯ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇತ್ತು ಎಂಬ ಅರಿವು ಎಲ್ಲರಿಗೂ ಇದೆ. ಆ ಬಳಿಕ ಜನತೆಯ ಆಶಾಕಿರಣವಾಗಿ ಮೂಡಿಬಂದ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ, ಐತಿಹಾಸಿಕ ಸಾಧನೆಗಳ ಜೊತೆಗೆ ಆರ್ಥಿಕತೆಯಲ್ಲಿ ದೇಶವನ್ನು 3ನೇ ಸ್ಥಾನದತ್ತ ಕೊಂಡೊಯ್ದು ಪ್ರಸಕ್ತ ಜೂ.10ರಂದು ದೇಶದ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಸಂಭ್ರಮಾಚರಣೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕರೆಯಂತೆ ನಡೆಯುತ್ತಿರುವ ಅರ್ಥಪೂರ್ಣ ಅಭಿಯಾನವನ್ನು ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಂಡು ಯಶಸ್ವಿಗೊಳಿಸೋಣ. ಒಗ್ಗಟ್ಟು ಮತ್ತು ಸಂಘಟಿತ ಪ್ರಯತ್ನದ ಮೂಲಕಯಾವುದೇ ಸವಾಲುಗಳನ್ನು ಮೆಟ್ಟಿ ನಿಂತು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮಗದೊಮ್ಮೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸೋಣ ಎಂದರು.

ಗೋಪೂಜೆಯೊಂದಿಗೆ ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ’ ಹಾಗೂ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗ್ರಾಮಾಂತರ ಮಂಡಲ ವ್ಯಾಪ್ತಿಯ 12 ಮಂದಿ ಕೃಷಿಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ ಕುಲಾಲ್, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ, ಸಹ ಸಂಚಾಲಕರಾದ ಶಿವಕುಮಾರ್ ಅಂಬಲಪಾಡಿ, ಅನಿತಾ ಶ್ರೀಧರ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹಾಗೂ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕಮಲಾಕ್ಷ ಹೆಬ್ಬಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು.

ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮೋಹನ್ ಚಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿ, ಪುಷ್ಪರಾಜ್ ಶೆಟ್ಟಿ ವಂದಿಸಿದರು.

 

Related Articles

error: Content is protected !!